ಭಾನುವಾರ, ಜೂನ್ 10, 2012

ಗುಪ್ತೋಷ್ಣ


                ಕೆಲವರು ಹೇಳುದುಂಟು ನೋಡಿ, "ಹಣ ಬಂದ ಮೇಲೆ ಅವ ಸಂಪೂರ್ಣ ಬದಲಾಗಿ ಹೋದ ಮರ್ರೆ". ಹಣ ಬಂದಾಗ ಮಾತ್ರ ಅಲ್ಲ,ಇದ್ದಕ್ಕಿದ್ದಂಗೆ ಎಲ್ಲಾ ಕಳೆದುಕೊಂಡಾಗ್ಲೂ ಮನುಷ್ಯನ ಸ್ವಭಾವದಲ್ಲಿನ ಬದಲಾವಣೆ ಪ್ರಕೃತಿ ನಿಯಮ. ಪ್ರಕೃತಿ ಮನುಷ್ಯನಿಗಾಗಲಿ, ಯಾವುದೇ ಪದಾರ್ಥಕ್ಕಾಗಲಿ, ಭೇದ ಭಾವ ತೋರಲ್ಲ.ಪದಾರ್ಥಗಳೂ ಸಹ ತನ್ನ ಸ್ವರೂಪವನ್ನು ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ಬದಲಾಯಿಸಬೇಕಂದ್ರೆ, ಒಂದು ಕನಿಷ್ಠ ಪ್ರಮಾಣದ ಶಕ್ತಿಯನ್ನು ತನ್ನೊಳಗೆ ಸೆಳೆದುಕೊಂಡಿರಬೇಕು ಇಲ್ಲ ಹೊರಹಾಕಿರಬೇಕು. ಈ ಶಕ್ತಿಗೆನೇ ಗುಪ್ತೋಷ್ಣ(latent heat) ಎನ್ನೋದು. ಉದಾಹರಣೆಗೆ ಪದಾರ್ಥವು ಜಾಸ್ತಿ ಸಾಂಧ್ರತೆಯ ಘನ ಸ್ಥಿತಿಯಿಂದ ಕಡಿಮೆ ಸಾಂಧ್ರತೆಯ ದ್ರವ ಸ್ಥಿತಿಗೆ ಬದಲಾಗುವಾಗ, ಅಣುಗಳಿಗೆ ಹರಡಿಕೊಳ್ಳಲು ವಿಶಾಲವಾದ ಜಾಗ ಸಿಕ್ಕಂತಾಗುತ್ತೆ. ಈ ಸ್ವಾತಂತ್ರ್ಯಕ್ಕೆ ಬೇಕಾಗುವಷ್ಟು ಅಗತ್ಯ ಶಕ್ತಿಯನ್ನು ಅಣುಗಳು ಹೊರಗಿನಿಂದ ಹೀರಿಕೊಳ್ಳುತ್ತವೆ. ಹಾಗೇ ಅನಿಲದಿಂದ ದ್ರವ ಅಥವಾ ಘನ ಆಗ್ಬೇಕಂದ್ರೆ, ಅದರಲ್ಲಿರೋ ಶಕ್ತಿಯನ್ನು ಬಿಟ್ಕೊಟ್ಟು, ಅಣುಗಳು ಸ್ವಾತಂತ್ರ್ಯವನ್ನು ಕಳೆದುಕೊಂಡು ಒಂದರ ಹತ್ತಿರಕ್ಕಿನ್ನೊಂದು ಬರ್ತವೆ. ಇದು  ಗುಪ್ತೋಷ್ಣದ ವ್ಯಾಖ್ಯಾನ ಅಲ್ಲ. ವ್ಯಾಖ್ಯಾನಗಳನ್ನ ಎಗ್ಸಾಮ್ಸ್ ಗಳಲ್ಲಿ ಬರಬರೆದೇ ಸುಸ್ತಾಗ್ಬಿಟ್ಟಿರ್ತೀವಿ. ಹ್ಹ! ಹ್ಹ! ನಾವು ಈಗ  ಗುಪ್ತೋಷ್ಣ ಎಂಬ ಪದಾನ ಒಪ್ಕೊಂಡು ಅದರ ಗುಣಲಕ್ಷಣಗಳನ್ನ ತಿಳಿಯೋಕೆ ಪ್ರಯತ್ನಿಸೋಣ. ಈ ಪ್ರಕ್ರಿಯೆಯಲ್ಲಿ ಹುಟ್ಟೋ ಅದರ ವ್ಯಾಖ್ಯಾನವನ್ನು ಪಠ್ಯಪುಸ್ತಕದಲ್ಲಿ ಕಂಡ ಸವಿನೆನಪುಗಳಿದ್ದಲ್ಲಿ ಒಮ್ಮೆಶಪಿಸೋಣ .... :)

            ಈಗ ನಾವು ೨ ಲೋಟ ನೀರನ್ನ ಪಾತ್ರದಲ್ಲಿ ಹಾಕಿ ಸ್ಟವ್ ಮೇಲೆ ಕಾಯ್ಸೋಕಿಡೋಣ.ಸ್ಟವ್ ಹಚ್ಚೋ ಮುನ್ನ ಅದರ ಉಷ್ಣತೆ ಸುತ್ತಲಿನ ವಾತಾವರಣದ ಉಷ್ನತೆಯೇ ಆಗಿರುತ್ತೆ. ಅಡಿಬೆಂಕಿ ರೂಪದಲ್ಲಿ ಸ್ಟವ್ ಕೊಡ್ತಿರೋ ಶಕ್ತಿಯನ್ನ ಬಳಸಿಕೊಂಡು ನೀರಿನ ಉಷ್ಣತೆ ಹೆಚ್ಚುತ್ತಾ ಹೋಗುತ್ತೆ. ಯಾವಾಗ ನೀರಿನ ಉಷ್ಣತೆ ೧೦೦ ಸೆಲ್ಸಿಯಸ್ ತಲುಪುತ್ತೋ, ಅಲ್ಲಿಗೆ ಅದರ ಉಷ್ಣಾಂಶದ ಏರಿಕೆ ನಿಂತು ಹೋಗುತ್ತೆ. ಹಾಗಾದರೆ ಇನ್ನೂ ಸ್ಟವ್ ಕೊಡ್ತಿರೋ ಶಕ್ತಿ ಎಲ್ಲಿಗೆ ಹೋಗ್ತಾ ಇದೆ? ಈ ಶಕ್ತಿ ಎಲ್ಲಿ ಅಡಗಿಕೊಂಡಿದೆ ಎಂಬ ಪ್ರಶ್ನಾತ್ಮಕ ಚಿಹ್ನೆಯೊಂದಿಗೇ  ಗುಪ್ತೋಷ್ಣ ಎಂಬ ಹೆಸರಿನ ನಾಮಕರಣ ನಡೆದುಹೋಗುತ್ತೆ....

೧೦೦ ಡಿಗ್ರೀ ಸೆಲ್ಸಿಯಸ್ ತಲುಪಿದ ನಂತರವೂ ಸ್ಟವ್ ನೀಡುತ್ತಿರೋ ಶಕ್ತಿಯು ನೀರಿನ ಅಣುಗಳ ನಡುವಿನ ಕೊಂಡಿ(bond) ಯನ್ನು ಸಡಿಲಗೊಲಿಸುತ್ತದೆ. ನೀರು ಅನಿಲ ಸ್ಥಿತಿಯ ನೀರಾವಿಯಾಗಿ ಪರಿವರ್ತನೆಗೊಳ್ಳುತ್ತದೆ. ಅಷ್ಟೇ ಅಲ್ಲದೆ, ಅದೇ ಸ್ಟವ್ ನ  ಶಾಖವನ್ನೂ ಬಳಸಿಕೊಂಡು, ನೀರಿನ ಮೇಲ್ಮೈ ಒತ್ತಡವನ್ನು ಮೀರಿ ವಾತಾವರಣವನ್ನು ಸೇರುತ್ತೆ... ಸಾಕು ನೀರು ಕುದಿತಿದೆ. ಸ್ಟವ್ ಆಫ್ ಮಾಡುವ. ಅಲ್ಲಿಗೆ ೧ ತೂಕದಷ್ಟು ನೀರು ೧೦೦ ಡಿಗ್ರೀ ತಲುಪಿದ ನಂತರ ಅದರ ಉಷ್ಣತೆ ಬದಲಾಯಿಸದೆ ಕುದ್ದು ಕುದ್ದು ಪೂರ್ತಿಯಾಗಿ ಆವಿಯಾಗೋಕೆ ಬೇಕಾಗಿರೋ ಶಾಖಕ್ಕೆ(ಶಕ್ತಿಗೆ)  ಗುಪ್ತೋಷ್ಣ ಎಂದು ಕರೀಬಹುದು.

ಸ್ಟವ್ ಮೇಲೆ ಇಡೋ ಬದ್ಲು ಫ್ರಿಡ್ಜ್ ನಲ್ಲಿ ಇಟ್ಟಿದ್ದಿದ್ರೆ, ಅದರ ಉಷ್ಣಾಂಶ ಕಡಿಮೆಯಾಗುತ್ತಾ ಸೊನ್ನೆ ಡಿಗ್ರೀ ತಲುಪುತ್ತಿತ್ತು. ಈ ಕ್ರಿಯೆಯಲ್ಲಿ ನೀರು ಬಿಟ್ಟುಕೊಡೊ ಶಕ್ತಿಯನ್ನು ಹೊರಗೆ ಹಾಕೋದು ಫ್ರಿಡ್ಜ್ ನ ಆದ್ಯ ಕರ್ತವ್ಯ.ಸೊನ್ನೆ ಸೆಲ್ಸಿಯಸ್ ನಲ್ಲಿ ನೀರು ಮಂಜುಗಡ್ಡೆ ಆಗುತ್ತಾ  ಗುಪ್ತೋಷ್ಣವನ್ನೂ ಬಿಟ್ಟುಕೊಡುತ್ತೆ. ಈ  ಗುಪ್ತೋಷ್ಣವನ್ನೂ ಫ್ರಿಡ್ಜ್ ಹೊರ ಹಾಕಿದ್ರೆ ನೀರು ಮಂಜುಗಡ್ಡೆ ಆಗುತ್ತೆ. ಇಲ್ಲಾಂದ್ರೆ ತಣ್ಣಗಿನ ಪಾನಿ ಮಾತ್ರ ಸಿಗುತ್ತೆ. ಪ್ರಾಯೋಗಿಕ ವಿವರಣೆಗೆ ಈ ವೀಡಿಯೋ ನೋಡಿ.

ನೀರಾವಿಯು ಮೋಡಗಳ ಹುಟ್ಟಿಗೆ ಬೇಕಾಗೋ ಮೂಲಭೂತ. ಸೂರ್ಯನ ಬಿಸಿಲಿನ ಶಾಖಕ್ಕೆ ಹೊಳೆ, ಸಮುದ್ರದ ಮೇಲ್ಮೈ ನೀರಿನ ಉಷ್ಣಾಂಶ ಏರಿಕೆ ಪೂರ್ಣಗೊಂಡು ಗುಪ್ತೋಷ್ಣವನ್ನು ಹೀರಿಕೊಂಡು ನೀರಾವಿಯಾಗಿ, ಗಾಳಿಯನ್ನು ತೇವಗೊಳಿಸುತ್ತದೆ. ಈ ನೀರಾವಿ ವಾತಾವರಣದಲ್ಲಿ ಮೇಲೇರಿ, ಕಡಿಮೆ ಉಷ್ಣಾಂಶದ ಜಾಗವನ್ನು ತಲುಪಿ ಅಲ್ಲಿ ತಾ ಹೀರಿಕೊಂಡಿದ್ದ  ಗುಪ್ತೋಷ್ಣವನ್ನು ಬಿಟ್ಟುಕೊಟ್ಟು, ಮೋಡಗಳಾಗಿ ಘನೀಕರಿಸುತ್ತದೆ. ಬಿಡುಗಡೆಯಾದ  ಗುಪ್ತೋಷ್ಣ ಸುತ್ತಲಿನ ಗಾಳಿಯನ್ನು ಬೆಚ್ಚಗಾಗಿಸುತ್ತದೆ. ಬೆಚ್ಚಗಿನ ಗಾಳಿಯಲ್ಲಿ ಅಣುಗಳು ಜಾಸ್ತಿ ಫ್ರೀ ಆಗಿರೋದ್ರಿಂದ ಅದರ ಸಾಂದ್ರತೆ ಕಡಿಮೆ. ಗಾಳಿಯ ಸಾಂದ್ರತೆಯಲ್ಲಿ ವ್ಯತ್ಯಾಸ ಸೃಷ್ಟಿಗೊಂಡುವಾತಾವರಣದಲ್ಲಿ ಏರುಪೇರನ್ನುಂಟುಮಾಡುತ್ತದೆ. ಈ ಅಸ್ಥಿರತೆಯನ್ನು ತಂತಾನೇ ನಿವಾರಿಸಿಕೊಳ್ಳಲು, ಬೆಚ್ಚಗಿನ ಗಾಳಿ ತಣ್ಣಗಿನ ಗಾಳಿಗಿಂತ ಮೇಲಕ್ಕೇರಲು ಯತ್ನಿಸುತ್ತದೆ. ಈ ಯತ್ನದಲ್ಲಿ ಗಾಳಿಯು, ಮೋಡಗಳನ್ನೂ ಬೇರೆ ಬೇರೆ ಎತ್ತರಕ್ಕೆ ಹರಡಿಸುತ್ತದೆ. ಎಷ್ಟು ಎತ್ತರಕ್ಕೆ ಹರಡುತ್ತದೆ ಎಂಬುದು ವಾತಾವರಣದ ಅಸ್ಥಿರತೆ ತೀವ್ರತೆ ಮೇಲೆ ನಿಂತಂತ ಅಂಶ. ಹಲವು ಜಾತಿಯ ಮೋಡಗಳು ಬೇರೆ ಬೇರೆ ಎತ್ತರದಲ್ಲಿ ನೆಲೆ ಕಂಡ್ಕೊತಾವೆ.

ಮೋಡಗಳು ದಟ್ಟವಾಗಿ ಆಗಸದಿ ಬೆಳೆದ ನಂತರ ಅವುಗಳ ನಡುವಿನ ತಿಕ್ಕಾಟದಿಂದ ಅಣುಗಳ ಬಂಧನವನ್ನು ಕಳಚಿಕೊಂಡು ಹೊರಬಂದ ಎಲೆಕ್ಟ್ರಾನ್ಸ್ ಗಳು ಫ್ರೀ ಚಾರ್ಜಸ್. ಫ್ರೀ ಚಾರ್ಜಸ್ ಯಾವತ್ತಿದ್ರೂ ಅಸ್ಥಿರ. ಅದು ಸೊನ್ನೆ ವೋಲ್ಟೇಜ್ ಉಳ್ಳ ಭೂಮಿ ಕಡೆ ತನ್ನ ಪ್ರಯಾಣ ಆರಂಭಿಸುತ್ತೆ, ನಮಗೆ ಮಿಂಚಾಗಿ ಕಾಣ್ಸುತ್ತೆ. ಕ್ಷಣಗಣನೆಯಲ್ಲಿ ಗುಡುಗು ಕೇಳ್ಸುತ್ತೆ.

ಅಂತೂ ನಾವು ಶುರು ಮಾಡಿದ  ಗುಪ್ತೋಷ್ಣ ಎಂಬ ಕಾನ್ಸೆಪ್ಟ್, ವಾತಾವರಣದಲ್ಲಿ ಉಂಟುಮಾಡೋ ಕೆಲವು ರೋಚಕ ವಿಷಯಗಳ ಕಿರುಪರಿಚಯವನ್ನು ಮೂಡಿಸಿದೆ. ಈ ಕಾನ್ಸೆಪ್ಟ್ ಇಷ್ಟಕ್ಕೇ ಸೀಮಿತಗೊಳ್ಳದೆ, ತಾಂತ್ರಿಕ ಮಟ್ಟದಲ್ಲಿ ಬಹುಪಯೋಗಿ ಆದುದರಿಂದ, ಇದನ್ನ ಅರ್ಥಮಾಡ್ಕೊಂಡ ನಾವೆಲ್ಲಾ ಒಂಥರಾ ಗ್ರೇಟು ಬಿಡ್ರೀ.... :)

ಪರೀಷ್ಕರಿಸಿಕೊಟ್ಟ ವಾಗೀಶ್ ಹೆಗ್ಡೆಯವರಿಗೆ ಧನ್ಯವಾದಗಳು.

          


            

5 ಕಾಮೆಂಟ್‌ಗಳು:

  1. ತುಂಬಾ ಉತ್ತಮ ಬರವಣಿಗೆ ಸವಿವರದೊಂದಿಗೆ, ಸರಳವಾಗಿ...
    ನಿಮ್ಮ ಹೊಸ ಬ್ಲಾಗು ಮುಂದೆ ಸಸೂತ್ರವಾಗಿ ಇನ್ನೂ ಉತ್ತಮ ಲೇಖನವನ್ನು ಕೊಡುವುದರೊಂದಿಗೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದು ಆಶಿಸುವೆನು...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುಂಬಾ ಸಂತೋಷ.... ಎಲ್ಲರ ಬೆಂಬಲದೊಂದಿಗೆ ಇನ್ನೂ ಹೆಚ್ಚು ಹೆಚ್ಚು ಬರೆಯುವ ಆಸೆ... ಧನ್ಯವಾದಗಳು ರಾಕೇಶ್... :)

      ಅಳಿಸಿ
  2. ವಿಜ್ಞಾನ ದ ಬಗ್ಗೆ ಇನ್ನು ಹೊಸ ಹೊಸ ವಿಡಿಯೋ ಗಳನ್ನು ಕಳಿಸಿ ಸರ್ ತುಂಬಾ ಹೆಲ್ಪ್ ಆಗುತ್ತೆ .......

    ಪ್ರತ್ಯುತ್ತರಅಳಿಸಿ