ಮಂಗಳವಾರ, ಮೇ 22, 2012

ರೆಸೋನ್ಯಾನ್ಸ್ -ಪ್ರಕೃತಿ ದನಿಯ ಪರಿಕಂಪನ.


ಸುಮಾರು ಹದಿನೈದು ವರ್ಷಗಳ ಹಿಂದಿನ ನೆನಪು.  ಸಂಜೆ ಹೊತ್ತಲ್ಲಿ ನನ್ನ ಸೈಕಲ್ ನ ಮುಂದೆ ಕೂಳಿಸಿಕೊಂಡು ಟಾರ್ ರೋಡ್ ಆಗಿರೋ ಗುಡ್ಡದ ಮೇಲಿನ ದೇವಸ್ಥಾನಕ್ಕೆ ಮೆಟ್ಟಿಕೊಂಡು ಹೋಗ್ತಿದ್ದ ನನ್ನಣ್ಣ. ಆ ಎತ್ತರಾನ ಏರಿಸ್ಬೇಕಾದ್ರೆ, ರೋಡಿನ ಅಗಲದ ಎರಡೂ ತುದಿಗಳನ್ನ ಮುಟ್ಟುತ್ತಾ,  ಹಾವು ಹರೆದ ಹಾಗೆ ಸೈಕಲ್ ಬಿಡ್ತಿದ್ದ. ನಂಗೆ ಈ ಕೆಲವು ವರ್ಷಗಳ ಈಚೆಗಸ್ಟೇ ಗೊತ್ತಾಗಿದ್ದು ಆ ರೀತಿಯ ಚಲನಕ್ಕೆ ಒಂದು ಹೆಸರಿದೆ, ಅದೇ ಸೈನುಸೋಯ್ಡಲ್ ಮೋಷನ್. ನಮ್ಮ ವೇದದಲ್ಲಿ ಹೇಳಿದ ಜೀವಾ ಎಂಬ ಪದವನ್ನು ಅರಬ್ ಗಣಿತಶಾಸ್ತ್ರಜ್ಞರು ಜೀಬಾ (ಅರ್ಥ: ಕಣಿವೆ) ಎಂದು ಉಚ್ಛರಿಸಿ, ಅದು ಲ್ಯಾಟಿನ್ ಭಾಷೆಯ ಸಮಾನಾರ್ಥಕ  ಸೈನುಸ್  ಆಗಿ, ನಂತರ ಇಂಗ್ಲೀಷಿನವರು ಅದನ್ನ ಸೈನ್ ಅಂತ ಹೇಳಿ ಈಗ ನಮಗೇ ಪಾಠ ಮಾಡ್ತಿರೋದು ಸ್ವಲ್ಪ ಮಟ್ಟಿಗೆ ದುಃಖಕರ ಆದರೂ ಇಲ್ಲಿ ಅದರ ಪ್ರಸ್ತಾವನೆ ಅಷ್ಟು  ಸೂಕ್ತ ಅಲ್ಲ.

ಎತ್ತರ ತೀವ್ರ ಇದ್ದಲ್ಲಿ ಸೈನುಸೋಯ್ಡಲ್ ಚಲನದ ಫ್ರೀಕ್ವೆನ್ಸಿ(ಪುನರಾವರ್ತನೆ) ಹೆಚ್ಚಿಸ್ತಿದ್ದ. ಕಡಿಮೆ ಎತ್ತರಕ್ಕೆ ಫ್ರೀಕ್ವೆನ್ಸಿ ನ ಕಡಿಮೆ ಮಾಡ್ತಿದ್ದ. Hz(ಹರ್ಟ್ಜ್) ಎಂಬುದು ಫ್ರೀಕ್ವೆನ್ಸಿ ಅಳೆಯುವ ಏಕಮಾನವಾಗಿದೆ. ಈ ಸೈನುಸೋಯ್ಡಲ್ ಚಲನೆ ಹಾಗು ಫ್ರೀಕ್ವೆನ್ಸಿ ಎಂಬ ಪದಗಳು ರೆಸೋನ್ಯಾನ್ಸ್(ಪರಿಕಂಪನ) ವಿಷಯವನ್ನು ವಿವರಿಸಲು ಅತಿಮುಖ್ಯವಾದ್ರಿಂದ ಈ ಮೇಲಿನಂತೆ ಅವುಗಳನ್ನ  ಪ್ರಸ್ಥಾಪಿಸಬೇ ಕಾಯ್ತು.

ನನ್ನಮ್ಮನತ್ರ ಒಂದು ಹಳೇ ಹಾರ್ಮೋನಿಯಂ ಪೆಟ್ಟಿಗೆ ಇದೆ. ಅದರ ಕೆಲೋ ಮಣೆ ಒತ್ಕೊಂಡು,  ಸ ರೀ ಗ ಮ ಪ ಹಾಡು ಅಂತ ತಲೆ ತಿಂತಾರೆ. ಹಾಡದಿದ್ರೆ ಅವ್ರಿಗೆ ಬೇಜಾರು. ಹಾಡಿದ್ರೆ ಶ್ರುತಿ ಕೂಡ್ಸಲ್ಲ ನೀನು ಅಂತ ಹೇಳಿ ನಂಗೆ ಬೇಜಾರು ಮಾಡ್ತಾರೆ. ಹೇಗಾದ್ರು ಮಾಡಿ ಶ್ರುತಿ ಅಂದ್ರೆ ಏನು ಅಂತ ತಿಳ್ಕೊಳ್ಳಲ್ಲೇ ಬೇಕು ಅಂತ ಅಂತರಜಾಲದ ಸೆರೆಯಾದ ನಂತರ ಕೆಲೊ ವಿಷಯಗಳು ತಿಳಿಯಲ್ಪಟ್ಟವು. ಶ್ರುತಿ ಎನ್ನೋದು ಶಬ್ದ ತರಂಗಗಳ ಫ್ರೀಕ್ವೆನ್ಸಿ ಅನುಭವ. ಉದಾಹರಣೆಗೆ ಎ ನೋಡ್ ನ ಶಬ್ದ ತರಂಗದ ಫ್ರೀಕ್ವೆನ್ಸಿ 440Hz (1 ಸೆಕೆಂಡ್ ಗೆ 440 ಬಾರಿ ಪುನರಾವರ್ತಿಸುತ್ತದೆ). ನಾನು ಇದಕ್ಕೆ ಶ್ರುತಿ ಕೂಡಿಸಬೇಕಂದ್ರೆ ನನ್ನ ಸ್ವರದ ಮಟ್ಟ 440Hz ನಸ್ಟೇ ಆಗಿರಬೇಕು. ಎರಡು ಒಂದೇ ಶ್ರುತಿ ಕೂಡಿದಾಗ ಅಲ್ಲಿ ಉಂಟಾಗುವ ಮಾಧುರ್ಯದ ಅನುಭವಕ್ಕೆ ಕಾರಣ ರೆಸೋನ್ಯಾನ್ಸ್.


ಕಾರಣ ಏನೋ, ರೆಸೋನ್ಯಾನ್ಸ್ ಅಂತ ಗೊತ್ತಾಯ್ತು. ಆದ್ರೆ ರೆಸೋನ್ಯಾನ್ಸ್ ಅಂದ್ರೆ ಏನು ಅಂತ ಅರ್ಥ ಮಾಡ್ಕೋಬೇಕಲ್ಲ! ಅದಿಕ್ಕೆ ಒಬ್ರು ಪ್ರೊಫೆಸರ್ ಹತ್ರ ಹೋಗಿ ರೆಸೋನ್ಯಾನ್ಸ್ ವಿವರಿಸುವಂತೆ ಕೇಳಿದೆ.ಅವ್ರು ತಮ್ಮ ಜಾಗದಿಂದ ಎದ್ದು,ಮೂಲೆಯಲ್ಲಿ ಬಿದ್ದಿದ್ದ ಕೊಲೊಂದನ್ನು ನನ್ನ ಕೈಗೆ ಕೊಟ್ರು. (ಚಿತ್ರ-೧ ನ್ನ ನೋಡಿ) ನಾ ಕೆಳಿದ್ದಕ್ಕೊಂದೂ ಉತ್ತರ ಕೊಡದೆ,ಅವರು ಮತ್ತಷ್ಟು ಹುಡುಕಾಟ ಮುಂದುವರಿಸಿದ್ರು.
ಚಿತ್ರ-೧
 ನಾನು ಪ್ರಶ್ನಿಸೋದನ್ನ ಬಿಟ್ಟು ಅವ್ರು ಹೇಳಿದಷ್ಟನ್ನ ಮಾಡ್ತಾ ಹೋದೆ. ಕೋಲಿನ ಮಧ್ಯಕ್ಕೆ ಕಟ್ಟುವಂತೆ ಸೂಚಿಸಿ ಹಗ್ಗವೊಂದನ್ನ ಕೊಟ್ರು. ಹಗ್ಗದ ಇನ್ನೊಂದು ಕೊನೆಗೆ ಗುಂಡು ಕಲ್ಲೊಂದ ಅವ್ರೆ ಕಟ್ಟಿದ್ರು.ನಾನು ನನ್ನ ಎರಡೂ ಕೈಗಳಿಂದ ಕೋಲಿನ ಎರಡು ಕೊನೆಗಳನ್ನ ಹಿಡ್ಕೊಂಡಿದೀನಿ. ಅದರ ಮಧ್ಯದ ಹಗ್ಗದಿಂದ ನೇತಾಡುತ್ತಿರುವ ಗುಂಡು ಕಲ್ಲನ್ನು ಅವ್ರು ಹಂದಾಡಿಸಿ ಅವ್ರ ಸೀಟ್ ಗೆ ಹೋಗಿ ಕೂತ್ರು. ಪರಿಸ್ಥಿತಿಯಲ್ಲಿ, ಕಲ್ಲಿನ ಚಲನ ಸೈನುಸೋಯ್ದಲ್ ಅಥವಾ ಸಿಂಪಲ್ ಹಾರ್ಮೋನಿಕ್ ಮೋಶನ್ ಅನ್ನೋದು ಮಾತ್ರ ನಂಗೆ ಗೊತ್ತು.ಅಂದ ಹಾಗೆ  ಸಿಂಪಲ್ ಹಾರ್ಮೋನಿಕ್ ಮೋಶನ್ ಅಂದ್ರೆ ನಿರ್ದಿಷ್ಟ  ಫ್ರೀಕ್ವೆನ್ಸಿ ಸೈನುಸೋಯ್ದಲ್ ಚಲನ ಎಂದರ್ಥ.ಅದರಲ್ಲೇನೂ ಹೊಸತಿಲ್ಲ.ಅವರ ಸೀಟ್ ನಿಂದಾನೆ ಮುಂದಿನ ಆದೇಶಗಳನ್ನ ಹೊರಡಿಸ್ತಾ ಹೋದ್ರು. ಆ ಕೋಲನ್ನೇ ಅಕ್ಷರೇಖೆ (ಆಕ್ಸಿಸ್)ಯಾಗಿಟ್ಟುಕೊಂಡು, ಕೋಲನ್ನು ಜೋರಾಗಿ ಅಂದ್ರೆ ಜಾಸ್ತಿ ಫ್ರೀಕ್ವೆನ್ಸಿಯೊಂದಿಗೆ ತಿರುಗಿಸುವಂತೆ ಹೇಳಿದ್ರು.ಆದೇಶಾನ ಕಾರ್ಯರೂಪಕ್ಕೆ ತರ್ತಿದ್ದಂಗೆ,ಕಲ್ಲಿನ ಸಿಂಪಲ್ ಹಾರ್ಮೋನಿಕ್ ಮೋಶನ್ ತೀವ್ರತೆ (ಇಂಟೆನ್ಸಿಟಿ) ಕಡಿಮೆ ಆಗ್ತಾ ನಿಂತು ಹೋಯ್ತು.ಕೋಲನ್ನು ಬಲು ಹಗುರವಾಗಿ ಅಂದ್ರೆ ಸಣ್ಣ  ಫ್ರೀಕ್ವೆನ್ಸಿಯೊಂದಿಗೆ ತಿರುಗಿಸುವಂತೆ ಹೇಳಿದ್ರು.ಆಗಲೂ ಸಹ ಕಲ್ಲಿನ ಚಲನ ನಿಂತು ಹೋಯ್ತು. ಬಾರಿ ಕಲ್ಲನ್ನು ಹಂದಾಡಿಸಿ, ಕಲ್ಲಿನ ಫ್ರೀಕ್ವೆನ್ಸಿ ಲ್ಲೇ ಕೋಲನ್ನು ತಿಪ್ಪುವಂತೆ ಹೇಳಿದ್ರು. ಬಲು ಅಚ್ಚರಿಯ ಸಂಗತಿಯೆಂದರೆ,  ನಿರ್ದಿಷ್ಟ  ಫ್ರೀಕ್ವೆನ್ಸಿಯಲ್ಲಿ ಚಲನದ ತೀವ್ರತೆ ಹೆಚ್ಚುತ್ತಾ ಹೋಯ್ತು.ನನ್ನ ಮುಖದಲ್ಲಿನ ಅಚ್ಚರಿ ನೋಡಿ ನಮ್ಮ ಪ್ರೊಫೆಸರ್,ದಾಟ್ಸ್ ರೆಸೋನ್ಯಾನ್ಸ್ ಅಂತ ಹೇಳಿ ಕೋಲನ್ನ ಕಸ್ಕೊಂಡು ನನ್ನ ಹೊರಗಟ್ಟಿದ್ರು.ಆದಿನ ನಂಗೆ ಪರಿಕಂಪನ ಅಂದ್ರೆ ಏನು ಅಂತ ಅರ್ಥ ಆಗಿದ್ದು ನೋಡ್ರಿ.

ಪರಿಕಂಪನ ಎಂಬ ಸಂಗತಿಯನ್ನು ಪ್ರಕೃತಿಯು ಅಡಗಿಸಿಕೊಂಡು,ನಮಗೆ ತೋರುತ್ತಿರೋ ಚಮತ್ಕಾರದ ಆಟವು ಭೌತಶಾಶ್ತ್ರದ ಕಲಿಕೆಯಲ್ಲಿ ಅತಿದೊಡ್ಡ ವಿಭಾಗವನ್ನೇ ಸೃಷ್ಟಿಸಿದೆ.ರೆಸೋನ್ಯಾನ್ಸ್ ನ ಪರಿಣಾಮವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.
                                         ರಚನಾತ್ಮಕ  ಪರಿಕಂಪನ  (ಕಂಷ್ಟ್ರುಕ್ಟಿವ್ ರೆಸೋನ್ಯಾನ್ಸ್   )
                                         ವಿಧ್ವಂಸಕ  ಪರಿಕಂಪನ         ( ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್     )

ಈ ಲೇಖನಾನ ಅರ್ಧಕ್ಕೆ ಬರೆದು, ಮಕ್ಕಳ ಕೂಟ ಪಾರ್ಕ್ ಗೆ ಹೋಗಿದ್ದೆ. ಮಕ್ಕಳ ಮುಗ್ಧ ಆಟೋಪಟಳಗಳಿಗೆ ಯಾರ ಮನಸ್ಸು ಪರಿಕಂಪಿಸದೆ ಇರೋಕೆ ಸಾಧ್ಯ ಹೇಳಿ! ಅಲ್ಲಿ ಕೆಲವು ಮಕ್ಕಳನ್ನು ಜೋಕಾಲಿಯಲ್ಲಿ ಕುಳಿಸಿ ತೂಗುತ್ತಿದ್ರು ಅವರ ಅಮ್ಮ,ಅಪ್ಪ.ಅವ್ರು ಜೋಕಾಲಿಯನ್ನು ತಳ್ಳುತ್ತಿರೋ  ಫ್ರೀಕ್ವೆನ್ಸಿ  ಮತ್ತು ಜೋಕಾಲಿಯು ತೂಗುತ್ತಿರೋ ಫ್ರೀಕ್ವೆನ್ಸಿ ಎರಡೂ ಒಂದೇ.  ಅಲ್ಲಿ ರೆಸೋನ್ಯಾನ್ಸ್  ನಂಗೆ ಕಾಣಿಸ್ತಿತ್ತು.ಆ ಜೋಕಾಲಿ ತೂಗೋ ತೀವ್ರತೆ ಜಾಸ್ತಿ ಆಗುತ್ತಲೇ ಇತ್ತು.ಜಾಸ್ತಿಯಾಗಿ ಜೋಕಾಲಿ ಮಕ್ಕಳನ್ನ ಉರುಳಿಸಿಬಿಟ್ಟರೆ ಎನ್ನೋ ಭಯದೊಂದಿಗೆ ಅದರ ಹತ್ತಿರ ಎದ್ದು ನಡೆದೆ.ಆಮೇಲೆ ನಾನು ನನ್ನ ಧನ್ಯವಾದಗಳನ್ನು ತಿಳಿಸಿದ್ದು ಗಾಳಿಯಲ್ಲಿನ ಘರ್ಷಣೆಗೆ. ಗಾಳಿಯಲ್ಲಿನ ಘರ್ಷಣೆ ಉಯ್ಯಾಲೆಯ ತೀವ್ರತೆಯನ್ನು ಒಂದು ಮಟ್ಟಕ್ಕಿಂತ ಮೇಲೆ ಹೋಗದಂತೆ ತಡೆದಿತ್ತು.ಓಹ್ ರಚನಾತ್ಮಕ ಪರಿಕಂಪನಕ್ಕೊಂದು ಉದಾಹರಣೆ ಸಿಗ್ತು. ಅಂದರೆ ಕನ್ಸ್ಟ್ರಕ್ಟಿವ್ ರೆಸೋನ್ಯಾನ್ಸ್ ಗೆ ಯಾವುದಾದರೊಂದು ವಿರೋಧಿಸೋ ಘರ್ಷಣೆ ಇರಲೇಬೇಕು ಎಂದಾಯ್ತು. ಕೆಲಸ ಅರ್ಧಕ್ಕೆ ಬಿಟ್ಟು ಪಾರ್ಕ್ ಗೆ ಬಂದಿದ್ದಕ್ಕೂ ಸಾರ್ಥಕ ಆಯ್ತು.

ಕೆಲವು ಒಪೇರಾ ಸಿಂಗರ್ಸ್ ಗಾಜಿನ ಲೋಟವನ್ನು ತಟ್ಟಿ ಅದರ ಸ್ವಾಭಾವಿಕ ಫ್ರೀಕ್ವೆನ್ಸಿ ಕಂಡು ಹಿಡಿದು ಶ್ರುತಿಯಲ್ಲೇ ಹಾಡಿ,ಆ ಲೋಟವನ್ನೇ ಒಡಿತಾರಂತೆ.ನೋಡಿ ಜನ ಸಾಧನೆ ಹಾದಿಯಲ್ಲಿ ಏನೇನ್ ಮಾಡ್ತಾರೆ ಅಂತ.ಹ್ಹ ಹ್ಹ.ಆ ಲೋಟಾನ ಬಚಾವು ಮಾಡೋಕೆ ಯಾವ ಘರ್ಷಣೆಯೂ ಬರ್ಲಿಲ್ಲ ಆದ್ರಿಂದ ಲೋಟ ಒಡಿತು. ಇದು ವಿಧ್ವಂಸಕ ಪರಿಕಂಪನ. ತೂಗು ಸೇತುವೆ ಕಟ್ಟೋ ಇಂಜಿನಿಯರ್ಸ್ ರೆಸೋನ್ಯಾನ್ಸ್ ಬಗ್ಗೆ ತಲೆ ಕೆಡಿಸ್ಕೊಂಡಷ್ಟಕ್ಕೂ ಸಾಲದು.ಸೇತುವೆ ಮೇಲೆ ಹಾಸೋ ಕಾಂಕ್ರೀಟ್ ಮೇಲ್ಮೈ,ತಟ್ಟೆ ಮೇಲೆ ಗಟ್ಟಿ ಮೊಸರು ಅತಿ  ಚಿಕ್ಕ ಫ್ರೀಕ್ವೆನ್ಸಿನಲ್ಲಿ ಹಂದಾಡಿದ ಹಾಗೆ  ಹಂದಾಡ್ತಿರುತ್ತೆ.ತುಂಬಾ ಚಿಕ್ಕ ಪ್ರಮಾಣದಲ್ಲಿ ಭೂಕಂಪನಗೊಂಡಾಗ ಅತಿ ಚಿಕ್ಕ ಫ್ರೀಕ್ವೆನ್ಸಿ(1Hz-3Hz) ಯ ವೈಬ್ರೇಶನ್ಸ್ ಇರ್ತವೆ.ಅದು ಬ್ರಿಡ್ಜ್ ಕಾಂಕ್ರೀಟ್ ಫ್ರೀಕ್ವೆನ್ಸಿಗೆ ಸರಿ ಹೊಂದಿ, ಬ್ರಿಡ್ಜ್ ಅನ್ನೇ ಕೆಡವಬಹುದು. 1989ರಲ್ಲಿ ಕ್ಯಾಲಿಫೋರ್ನಿಯಾದ ನಿಮಿಟ್ಸ್ ಫ್ರೀವೆ ಕುಸಿದಿರೋದು ಇದೇ ಕಾರಣದಿಂದ ಎಂದು ದಾಖಲಾತಿ ಮಾಡಲಾಗಿದೆ. ಭೂಕಂಪ ಬಿಡಿ, ಬರೀ ಗಾಳಿಯ ಸುಳಿಗೇ ತೂಗು ಸೇತುವೆ ಕುಸಿದು ಬಿದ್ದಿರೋ ಘಟನೆಗೆ ಸಾಕ್ಷಿ ವಾಶಿಂಗ್ಟನ್ ನ ಟಕೋಮ ನ್ಯಾರೋ ಬ್ರಿಡ್ಜ್ ಕೊಲ್ಯಾಪ್ಸ್.  ಹರಿಯೋ ನೀರಿನಲ್ಲಿ ಸುಳಿ ಹುಟ್ಟಬೇಕಾದರೆ ತಳದಲ್ಲಿ ಯಾವುದಾದರೂ ದಿಢೀರ್ ಡಿಸ್ಟರ್ಬೆನ್ಸ್ ಇರಬೇಕು.ಇಲ್ಲಿ ಬೀಸುತ್ತಿರೋ ಗಾಳಿಗೆ ಡಿಸ್ಟರ್ಬೆನ್ಸ್ ಆಗಿದ್ದು  ಬ್ರಿಡ್ಜ್.ಗಾಳಿಯಲ್ಲಿ ಸುಳಿ ಹುಟ್ಟಿಕೊಂಡು,  ಗಾಳಿಯ ವೇಗ ಈ ಬ್ರಿಡ್ಜ್ ನ ಸ್ವಾಭಾವಿಕ ಫ್ರೀಕ್ವೆನ್ಸಿಗೆ ಸರಿ ಹೊಂದಿ, ಬ್ರಿಡ್ಜ್ ಅನ್ನೇ ನುಂಗಿಬಿಟ್ಟದ್ದು ಇತಿಹಾಸದ ಪುಟ ಸೇರಿವೆ. ನಾನು ಪುಟಗಳನ್ನು ಓದಿನೇ ಇಲ್ಲಿ ಗೀಚಿರೋದು.ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್  ಈ ಮೆಲಿನವಕ್ಕಿಂತ ಸ್ಟ್ರಾಂಗ್ ಉದಾಹರಣೆಗಳು ಬೇಕೇ!

ಈ ಪುಟ್ಟ ಲೇಖನವನ್ನು ಮುಗಿಸೋ ಮುನ್ನ ಒಂದು ಕೊನೆಯ ಟಾಪಿಕ್ ಬಗ್ಗೆ ಹೇಳೋಕೆ ಇಷ್ಟಪಡ್ತೀನಿ. ಎಂ ಆರ್ ಸ್ಕಾನಿಂಗ್ ಬಗ್ಗೆ.ಇದನ್ನ ಒಂದು ವಸ್ತುವಿನ ಅಣುಗಳ ಆಯಕಟ್ಟು (ಮೊಲಿಕ್ಯುಲರ್ ಸ್ಟ್ರಕ್ಚರ್) ಹಾಗು ರೋಗಿಯ ದೇಹದೊಳಗಿನ ವೈದ್ಯಕೀಯ ಸಂಬಂಧದ ಚಿತ್ರಗಳನ್ನು ತೆಗೆಯಲು ಬಳಸ್ತಾರೆ. ಇದರ ನಿಜವಾದ ಹೆಸರು ನ್ಯೂಕ್ಲಿಯಾರ್ ಮ್ಯಾಗ್ನೆಟಿಕ್  ರೆಸೋನ್ಯಾನ್ಸ್ ಇಮೇಜಿಂಗ್.ಜನರು ನ್ಯೂಕ್ಲಿಯಾರ್ ಅನ್ನೋ ಪದಕ್ಕೆ ಹೆದರಿ ಸ್ಕ್ಯಾನಿಂಗ್ ಮಾಡಿಸ್ಕೊಳ್ಳದಿದ್ರೆ ಅಂತ ಯೋಚಿಸಿ ಎಂ ಆರ್ ಐ ಎಂದು ಹೆಸರಿಟ್ಟಿದ್ದಾರೆ ಅನ್ಸುತ್ತೆ.ಇನ್ನು ಇದು ಹೇಗೆ ಕೆಲಸ ಮಾಡತ್ತೆ ಎಂದು ನೋಡೋಣ.

ನಮ್ಮ ದೇಹದಲ್ಲಿ ಹೈಡ್ರೋಜೆನ್ ಅಣುಗಳು ಬೇರೆ ಬೇರೆ ರೂಪದಲ್ಲಿ ಹೇರಳವಾಗಿರುತ್ತೆ. ಇದರೊಳಗಿನ ಬೀಜಾಣು (ನ್ಯೂಕ್ಲಿಯಸ್) ಅದರ ಜಾಗದಲ್ಲೇ ಗಿರ್ರನೆ ಸುತ್ತುತ್ತಿರುತ್ತದೆ, ಅಂದರೆ ಅದರದ್ದೇ ಆದ ನಿರ್ದಿಷ್ಟ ಫ್ರೀಕ್ವೆನ್ಸಿಯ ಸ್ಪಿನ್ ಹೊಂದಿರುತ್ತದೆ. ಅಭೀಕ್ಷಣ(ಸ್ಕ್ಯಾನಿಂಗ್) ಪ್ರಕ್ರಿಯೆಯಲ್ಲಿ,ಹೊರಗಿನಿಂದ ಸ್ಕ್ಯಾನಿಂಗ್ ಮೆಶೀನ್ ಹಲವು ಫ್ರೀಕ್ವೆನ್ಸಿಯಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್(ಇಎಂಕಿರಣಗಳನ್ನು ಕಳಿಸ್ತಿರುತ್ತೆ. ಯಾವಾಗ ಹೊರಗಿನಿಂದ ಬಂದ ಕಿರಣಗಳ ಫ್ರೀಕ್ವೆನ್ಸಿ ನಮ್ಮ ಬೀಜಾಣುವಿನ ಸ್ಪಿನ್ ಫ್ರೀಕ್ವೆನ್ಸಿ ಜೊತೆ ಸರಿಹೊಂದುತ್ತೋ, ಆಗ ಅದರ ಸ್ಪಿನ್ ನ ತೀವ್ರತೆ ಹೆಚ್ಚುತ್ತದೆ.ಅಣುವಿನ ಒಳಗೆ ಯಾವುದೇ ಘರ್ಷಣೆ ಇಲ್ಲದ್ದರಿಂದ, ಇದು ಶಕ್ತಿಯನ್ನು ಇಎಂ ಕಿರಗಳ ರೂಪದಲ್ಲೇ ಹೊರಸೂಸುತ್ತದೆ. ಹೀಗೆ ಬೀಜಾಣುವಿನ ರೆಸೋನ್ಯಾನ್ಸ್ ರೂಪಿಕೆ(ಪ್ಯಾಟರ್ನ್) ಅನ್ನು  ಪರಿಶೀಲಿಸಿ, ಅದರಿಂದ ವೈದ್ಯಕೀಯ ನಿರ್ಧಾರಗಳನ್ನು ತೆಗೆದ್ಕೊಳ್ತಾರೆ.
ರೆಸೋನ್ಯಾನ್ಸ್ ಎಂಬ ಸಮುದ್ರದಲ್ಲಿ ನಾ ಹಿಡಿದಿಟ್ಟ ಒಂದು ಲೋಟದಷ್ಟು ವಿಷಯವನ್ನು ಲೇಖನ ರೂಪದಲ್ಲಿ ಬರೆದಿದ್ದೇನೆ.ಒಂದೇ ವಾಕ್ಯದಲ್ಲಿ ಹೇಳಿ ಮುಗಿಸ್ಬೇಕಂದ್ರೆ ಈ ಪ್ರಕೃತಿಯಲ್ಲಿನ ಎಲ್ಲಾ ಆಗು ಹೋಗುಗಳಿಗೆ ಪ್ರಕೃತಿಯೇ ಪರಿಕಂಪಿಸಿ ನಮಗೆ ಉತ್ತರವನ್ನು ನೀಡುತ್ತದೆ. hಹಾಂ ನಾವು ಹುಡ್ಗೀರ್ಗೆ ಕಣ್ಣು ಹೊಡೆದಾಗ ಅವ್ರಿಂದ ಸಿಗೋ ಪ್ರತಿಕ್ರಿಯೆಗೆ ಅವರ ಮನಸ್ಸಿನಲ್ಲಿನ ರೆಸೋನ್ಯಾನ್ಸ್ ಏ ಹೊಣೆ. ಒಂದು ವೇಳೆ ಆ ಮನಸ್ಸಿನ ರೆಸೋನ್ಯಾನ್ಸ್ ಗೆ ಪ್ರೀತಿಯ ಘರ್ಷಣೆ ಉಂಟಾದರೆ ಕಂಷ್ಟ್ರುಕ್ಟಿವ್ ರೆಸೋನ್ಯಾನ್ಸ್. ಪ್ರೀತಿ ಇಲ್ಲಾಂದ್ರೆ   ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್ . ಯಾವ್ದಕ್ಕೂ ಈ ರೆಸೋನ್ಯಾನ್ಸ್ ಬಗ್ಗೆ ಸ್ವಲ್ಪ ಹುಷಾರಾಗಿರಬೇಕು ನಾವು... J h


 ಚಿತ್ರ ಬಿಡಿಸಿ ಕೊಟ್ಟ ರಮ್ಯ ಆರ್ ಅವರಿಗೆ ಧನ್ಯವಾದಗಳು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ