ಶನಿವಾರ, ಫೆಬ್ರವರಿ 1, 2014

ಏಕಾಗ್ರಚಿತ್ತ ದರ್ಶನ


       ಮನಸ್ಸು ಚಂಚಲ. ಒಂದೆಡೆ ನಿಲ್ಲುವುದೇ ಇಲ್ಲ, ಎಲ್ಲೆಂದರಲ್ಲಿ ಹರಿದಾಡುತ್ತಿರುತ್ತದೆ. ಅಂಥ ಒಂದು ಮನಸ್ಸನ್ನು ಒಂದರ (‘ಏಕ) ಮೇಲೆ ಕೇಂದ್ರೀಕರಿಸುವ ಸಾಧನೆಗೆ ಯೋಗ ಅಥವಾ ಧ್ಯಾನ ಎಂದು ಕರೆಯುತ್ತಾರೆ. ಪತಂಜಲಿ ಯೋಗ ಸೂತ್ರದಲ್ಲಿ ಹೇಳಿದಂತೆ, ಯೋಗ = ಚಿತ್ತ ವೃತ್ತಿ ನಿರೋಧಕ. ಮನಸ್ಸು ಯಾವುದೋ ಆಲೋಚನೆಗಳ ಕೊನೆಯಿಲ್ಲದ ವೃತ್ತಕ್ಕೆ ಆವೃತ್ತಿಯಾಗುವುದನ್ನು ತಡೆಗಟ್ಟುವ ಮಾರ್ಗವೇ ಯೋಗ. ಯೋಗದ ರಹಸ್ಯವೇ ಒಂದರ ಮೇಲೆ ಮಾತ್ರ ಚಿತ್ತವನ್ನು ಕೇಂದ್ರೀಕರಿಸುವುದು. ಚಿತ್ತವನ್ನು ಏಕಾಗ್ರಚಿತ್ತವನ್ನಾಗಿಸುವುದು. ಏಕಾಗ್ರಚಿತ್ತ = ‘ಏಕ’+ಅಗ್ರ+ಚಿತ್ತ, ಒಂದಕ್ಕೆ ಅಗ್ರ ಸ್ಥಾನವನ್ನು ಕೊಡುವ ಚಿತ್ತ.ಏಕದ ಮಹತ್ವ ಶೂನ್ಯ, ಅನಂತಕ್ಕಿಂತ ಹೆಚ್ಚು. ಏಕೆಂದರೆ ಈ ಏಕಕ್ಕೆ ಅಗ್ರ ಸ್ಥಾನ ಕೊಡುವ ಚಿತ್ತ ಮಾತ್ರ ಶೂನ್ಯ ಅಥವಾ ಅನಂತವನ್ನು ಅನುಭವಿಸಲು ಸಾಧ್ಯ.

ವಿಗ್ರಹ ಪೂಜೆಯಲ್ಲಿ ಏಕ


        ನಮ್ಮ ದೇಶೀಯ ಸಂಸ್ಕೃತಿ ವಿಗ್ರಹ ಪೂಜೆಗೆ ಸಾಕಷ್ಟು ಒತ್ತು ನೀಡುತ್ತದೆ. ಸಾವಿರಾರು ದೇವಾಲಯಗಳು, ಲೆಕ್ಕವಿಲ್ಲದಷ್ಟು ದೇವರುಗಳು. ನಾವು ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕಾದ ಆ ಏಕ ಯಾವುದಾಗಿರಬೇಕು ಎಂಬುದು ಒಂದು ಪ್ರಶ್ನೆಯಾಗಿ ಉಳಿಯಬಾರದೆಂದು ಈ ವಿಗ್ರಹ ಪೂಜೆಯ ಸಂಸ್ಕೃತಿಯು ಹುಟ್ಟಿಕೊಂಡಿದೆ. ದೇವರು ಒಬ್ಬನೇ ಆದರೂ ಅವನನ್ನು ಕಂಡುಕೊಳ್ಳುವ ಮಾರ್ಗ ಹಲವು. ಇಷ್ಟೊಂದು ಆಯ್ಕೆಯ ಸ್ವಾತಂತ್ರ್ಯದೊಂದಿಗೆ ಒಂದೇ ವಿಗ್ರಹವನ್ನು(‘ಏಕವನ್ನು) ಆರಾಧಿಸುವುದು ತುಂಬಾ ಮುಖ್ಯ. ನಮ್ಮ ಶೃದ್ಧೆ ಏನೇ ಇರಲಿ, ಅದು ಆ ಏಕದಮೇಲಿರಬೇಕು. ಇದೇ ಕಾರಣದಿಂದಾಗಿ ಇಷ್ಟ ದೇವತೆ, ಮನೆ ದೇವರು ಎನ್ನುವ ಪರಿಕಲ್ಪನೆಗಳು ನಮ್ಮ ರೂಢಿಯಲ್ಲಿರುವುದು. ಏಕವು ವಿಗ್ರಹವೇ ಆಗಿರಬೇಕೆಂದಿಲ್ಲ. ಅದು ಏನು ಬೇಕಾದರೂ ಆಗಿರಬಹುದು. ಓಂಕಾರ, ಬಿಂದು, ತಂದೆ, ತಾಯಿ, ಗಂಡ (ಹೆಂಡತಿ), ಹೀಗೆ ಯಾವುದೇ ಅಸ್ತಿತ್ವದಲ್ಲಿ ಇರುವ ಅಥವಾ ಅಸ್ತಿತ್ವ ಇಲ್ಲದ ಕೇವಲ ಕಲ್ಪನೆಯ ಪದಾರ್ಥವೂ ಆಗಿರಬಹುದು. ಹೀಗೆ ಏಕದಲ್ಲಿ ಮನಸ್ಸನ್ನು ಪ್ರತಿಷ್ಠಾಪಿಸುವುದರಿಂದ ಆ ಏಕವು ಪಂಚೇಂದ್ರಿಯಗಳ ಗೋಚರಕ್ಕೆ ಬರುತ್ತಿದ್ದಂತೆಯೇ, ಮನಸ್ಸು ಏಕದ ಮೇಲೆ ನೆಟ್ಟುಕೊಳ್ಳುತ್ತದೆ. ಇದು ಒಂದು ದಿನದಲ್ಲಿ ಆಗುವಂಥದ್ದಲ್ಲ. ನಿಧಾನವಾಗಿ ವರ್ಷಗಳ ಗಡುವಿನಲ್ಲಿ ರೂಢಿಯಿಂದ ಅಥವಾ ಹವ್ಯಾಸದಿಂದ ಸಾಧಿಸಬಹುದಾದ ಯೋಗ, ಏಕಾಗ್ರ ಚಿತ್ತ ದರ್ಶನ.

ಏಕದ ರಹಸ್ಯ


     ಹೀಗೆ ಏಕದ ಮೇಲೆ ನೆಟ್ಟ ಮನಸ್ಸು ಇಂದ್ರಿಯದ ಬಗ್ಗೆ ಗಮನ ಹರಿಸುವುದು ಕ್ರಮೇಣ ಕಡಿಮೆಯಾಗುತ್ತದೆ. ಒಂದು ಘಟ್ಟದಲ್ಲಿ ಇಂದ್ರಿಯ ನೀಡುವ ಮಾಹಿತಿಯನ್ನು ಮನಸ್ಸು ಆಲಿಸುವುದೇ ಇಲ್ಲ. ಅಲ್ಲಿಗೆ ತಾತ್ಕಾಲಿಕವಾಗಿ ನಮ್ಮ ಇಂದ್ರಿಯದ ಬಟನ್ ಆಫ್ ಮಾಡಿ ಇಟ್ಟ ಹಾಗೆ. ಇಂದ್ರಿಯಗಳು ಆಫ್ ಆಗಿದೆ. ಮನಸ್ಸು ಏಕದ ಮೇಲೆ ನೆಟ್ಟಿದೆ. ಈ ಸ್ಥಿತಿಯನ್ನು ತಲುಪಲು ಹೆಚ್ಚು ಹೆಚ್ಚು ಅಭ್ಯಾಸ ಮಾಡುತ್ತಾ ಹೋದಂತೆ, ಈ ಅಭ್ಯಾಸ ನಮ್ಮ ಹವ್ಯಾಸವಾಗುತ್ತದೆ. ಹವ್ಯಾಸವನ್ನು ನಾವು ಯಾರ ಆದೇಶವಿಲ್ಲದೆ ನೆರವೆರಿಸುತ್ತೇವೆ. ಹವ್ಯಾಸದ ಶಕ್ತಿಯೇ ಅಂಥದ್ದು. ವಾಹನವನ್ನು ಓಡಿಸುವುದನ್ನು ಮೊದಮೊದಲು ಕಲಿಯುವಾಗ ಮನಸ್ಸು ಸಂಪೂರ್ಣ ಅದರ ಮೇಲೇ ಇರುತ್ತದೆ. ಕ್ರಮೇಣ ಅಭ್ಯಾಸವಾಗುತ್ತಿದ್ದಂತೆ ಸ್ಟೇರಿಂಗ್, ಕ್ಲಚ್ ಮೇಲೆ ಗಮನವೇ ಹರಿಸುವುದಿಲ್ಲ. ಆದರೂ ವಾಹನವನ್ನು ಸರಿಯಾಗಿಯೇ ಓಡಿಸುತ್ತೇವೆ. ಹಾಗೆಯೇ ಏಕದ ಮೇಲೆ ನೆಟ್ಟ ಮನಸ್ಸು ಹವ್ಯಾಸದ ಬಲದಿಂದ ಒಂದಿನ ಏಕದ ಮೇಲೆ ಪ್ರತಿಷ್ಠಾಪನೆಯಾಗಿರುವುದನ್ನೇ ಮರೆತುಬಿಡುತ್ತದೆ. ಆಗ ಮನಸ್ಸು ಖಾಲಿ. ಅದೇ ಶಾಂತಿಯುತ ಮನಸ್ಸು. ಸಮಾಧಿ ಸ್ಥಿತಿಯ ಮೊದಲನೇ ಹಂತದ ಪರಿಕಲ್ಪನೆ ಇದಾಗಿರಬಹುದು. ಇಂದ್ರಿಯಗಳ ಮಾಹಿತಿಯನ್ನು ಪರಿಷ್ಕರಿಸುವುದರಲ್ಲಿ ನಿರತವಾಗಿರುವ ಮನಸ್ಸಿಗೆ ಆತ್ಮದ ಅಸ್ಥಿತ್ವವೇ ಸುಳ್ಳು ಎಂದೆನಿಸುತ್ತದೆ. ನಾನು ಎಂಬುದು ಆತ್ಮದ ಬದಲು ಅಹಂಕಾರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಏಕದ ಮೇಲೆ ನೆಟ್ಟ ಮನಸ್ಸು ಶಾಂತಿಯನ್ನು ಕಂಡುಕೊಳ್ಳುವುದು ಒಳಾಭಿಮುಖವಾಗಿ. ನಾನು ಎಂಬ ಅಹಂಕಾರದ ಅಜ್ಞಾನದಿಂದ ನಾನು ಎಂಬ ಆತ್ಮದ ಜ್ಞಾನದೆಡೆಗಿನ ಪ್ರಯಾಣದ ವಾಹನವೇ ಈ ಏಕ’.

ಪ್ರೀತಿಯ ಅಂಕುರ


     ಯಾವ ಏಕವನ್ನು ವಾಹನವಾಗಿ ಬಳಸಲಿ? ‘ಏಕವನ್ನು ಆರಿಸಿಕೊಳ್ಳಲು ಸ್ಫೂರ್ತಿ ಯಾವುದು? ಇದಕ್ಕೆ ಒಂದು ಉತ್ತರ ಪ್ರೀತಿ. ಪ್ರೀತಿ ಇರುವಲ್ಲಿ ಭಕ್ತಿ ಇರುತ್ತದೆ. ಉದಾಹರಣೆಗೆ ಗೋಪಿಕೆಯರು ಕೃಷ್ಣನನ್ನು ಪ್ರೀತಿಸುತ್ತಿದ್ದರು. ಕೃಷ್ಣನ ಆರಾಧನೆಯಲ್ಲಿ ಭಕ್ತಿ ಇತ್ತು. ಯಾವಾಗಲೂ ಅವರ ಮನಸ್ಸು ಕೃಷ್ಣನಿಂದಲೇ ತುಂಬಿಕೊಂಡಿರುತ್ತಿತ್ತು. ಈ ಭಕ್ತಿಯಿಂದ ನೆಟ್ಟ ಅವರ ಮನಸ್ಸಿಗೆ ಇಂದ್ರಿಯದ ಮಾಹಿತಿ ಕೇಳಿಸುತ್ತಿರಲಿಲ್ಲ. ಆದ್ದರಿಂದ ಇಂದ್ರಿಯ ಹುಟ್ಟಿಸುವ ಭಯ, ಮನಸ್ಸು ಯೋಚಿಸುವ ಮನೆಯ ರೀತಿರಿವಾಜು, ಸಮಾಜದದ ಕಟ್ಟಲೆಯ ಚಿಂತೆ, ಇವೇನೂ ಇಲ್ಲದೆ, ಮಧ್ಯರಾತ್ರಿ ಅರಣ್ಯದಲ್ಲಿ ಕೃಷ್ಣನ ಕೊಳಲಿನ ನಾದಕ್ಕೆ ಹೆಜ್ಜೆ ಹಾಕುತ್ತಿದ್ದರು. ಅವರಲ್ಲಿ ಅನುಭವಿಸುತ್ತಿದ್ದುದು ಪ್ರಶಾಂತ ಮನಸ್ಸೇ ಹೊರತು ಬಯಕೆಗಳಲ್ಲ. ಗೋಪಿ ಹಾಗೂ ಗೋಪಿಕೆಯರ ಸಂಬಂಧವು ಭಕ್ತಿಯೋಗ ಅಥವಾ ಪ್ರೀತಿ ಯೋಗದ ಒಂದು ಒಳ್ಳೆಯ ದೃಷ್ಟಾಂತವಾಗಿದೆ.

ಇಂದ್ರಿಯಗಳ ಸಹಕಾರ


                ಏಕವನ್ನು ಆರಿಸಲು ಸ್ಫೂರ್ತಿಯು ಪ್ರೀತಿ ಆದರೆ, ಪ್ರೀತಿಯನ್ನು ಆರಿಸಿಕೊಳ್ಳಲು ಸ್ಫೂರ್ತಿ ಯಾವುದು? ಒಂದು ಉತ್ತರ ಇಂದ್ರಿಯ. ಹೌದು. ಇಂದ್ರಿಯಗಳಿಗೆ ಯಾವ ಏಕದ ಮೇಲೆ ಬಯಕೆಗಳ ಗೊಂಚಲು ಕಾಣಿಸುತ್ತದೋ, ಅದೇ ಏಕದ ಮೇಲೆ ಮನಸ್ಸು ಪ್ರೀತಿ ತೋರುತ್ತದೆ. ಮೊದಲು ಇಂದ್ರಿಯದ ಮಾತನ್ನು ಕೇಳಿ ಪ್ರೀತಿ ಬೆಳೆಸಿಕೊಂಡ ಮನಸ್ಸು ನಂತರ ಇಂದ್ರಿಯಗಳನ್ನು ಆಲಿಸದೇ, ತಾನು ಪ್ರೀತಿಸುತ್ತಿದ್ದ ಪ್ರೀತಿಯನ್ನೂ ಮರೆತು ಶಾಂತಿ ಪಡೆದು, ಆತ್ಮದ ಅಭಿವ್ಯಕ್ತಿಗೆ ದಾರಿ ಮಾಡಿಕೊಡುತ್ತದೆ. ತುಳಸೀದಾಸರು ತನ್ನ ಹೆಂಡತಿಯ ಸಂಘ ಸುಖಕ್ಕೆ ಎಷ್ಟು ಶರಣಾಗಿದ್ದರೆಂದರೆ, ಆಕೆ ಹೋದಲ್ಲೆಲ್ಲಾ ಅರಸಿ ಪಯಣಿಸುತ್ತಿದ್ದರಂತೆ. ಇದನ್ನು ಸಹಿಸಿಕೊಂಡು ಸುಸ್ತಾದ ಅವರ ಹೆಂಡತಿ ಒಂದಿನ ಕೋಪದಲ್ಲಿ ನೀವು ನನ್ನ ಮೂಳೆ ಮಾಂಸಕ್ಕೆ ಹಾತೊರೆಯುವ ಬದಲು ಶ್ರೀ ರಾಮನನ್ನು ನೆನೆದಿದ್ರೆ ಈ ಭೂಮಿ ಮೇಲಿನ ಅಸ್ತಿತ್ವದ ಭಯವನ್ನೇ ಕಳೆದುಕೊಳ್ಳಬಹುದಾಗಿತ್ತುಎಂದು ನಿಷ್ಟೂರವಾಗಿ ನುಡಿದುಬಿಟ್ಟರಂತೆ. ಹೆಂಡತಿಯ ಜೊತೆಗಿನ ಇಂದ್ರಿಯ ಸುಖಕ್ಕೆ ಶರಣಾಗಿದ್ದರಿಂದ ಅವರ ಮನಸ್ಸಿನಲ್ಲಿ ಪ್ರೀತಿ ನೆಲೆಸಿತ್ತು. ಹೆಂಡತಿಯ ಮೇಲಿನ ಪ್ರೀತಿ ಅವರ ಹವ್ಯಾಸವಾಗಿತ್ತು. ಈಗ ಆ ಪ್ರೀತಿಯೇ ಹೆಂಡತಿಯ ಸುತ್ತ ಸುತ್ತುವುದನ್ನು ಖಂಡಿಸಿದಾಗ, ಅವರ ಮನಸ್ಸು ಆ ಜಾಗವನ್ನು ಬೇರೆ ಯಾವುದರಿಂದಲೂ ಭರಿಸಲು ಸಾಧ್ಯವಾಗದೆ, ತಟಸ್ಥವಾಗಿತ್ತು. ಮನಸ್ಸು ಶಾಂತಿಯ ಅನುಭವ ಪಡೆದಿತ್ತು, ತುಳಸಿದಾಸರಿಗೆ ಜ್ಞಾನೋದಯವಾಗಿತ್ತು.

ಮೂಲ ಮಂತ್ರ


ಒಂದು ವೇಳೆ ತುಳಸಿದಾಸರು ಹೆಂಡತಿಯನ್ನು ಪ್ರೀತಿಸಿದಷ್ಟೇ ಇನ್ನೊಂದು ಪದಾರ್ಥವನ್ನು ಪ್ರೀತಿಸಿದ್ದಿದ್ದರೆ, ಹೆಂಡತಿ ಸ್ವಲ್ಪ ನಿಷ್ಟೂರವಾಗಿ ಮಾತನಾಡಿದರೆ ಸಾಕು ಮನಸ್ಸು ಆ ಇನ್ನೊಂದು ಪ್ರೀತಿಯ ಸಹಾರ ತಗೊಂಡು, ಈ ಹೆಂಡತಿಯ ಮೇಲೆ ದ್ವೇಷ ಭಾವದ ಕೆತ್ತನೆ ಶುರುಮಾಡುತ್ತಿತ್ತು. ಲೌಕಿಕ ಚಿಂತನೆಗಳ ವೃತ್ತ ಸುತ್ತುವುದನ್ನು ಮತ್ತೆ ಮುಂದುವರಿಸುತ್ತಿತ್ತು. ಮನಸ್ಸು ಎಲ್ಲಿಯವರೆಗೆ ಆಲೋಚನೆಗಳ ವೃತ್ತವನ್ನು ಸುತ್ತುತ್ತಿರುತ್ತದೋ ಅಲ್ಲಿಯತನಕ ಆತ್ಮದ ಅಸ್ತಿತ್ವ ಆ ಮನಸ್ಸಿಗೆ ಒಂದು ಖಚಿತ ಸುಳ್ಳಾಗಿಯೇ ಅನುಭವವಾಗುತ್ತದೆ. ಮನಸ್ಸು ಶಾಂತವಾದಾಗ ಮಾತ್ರ ಆತ್ಮದ ಚೇತನ ಹೊಮ್ಮುತ್ತದೆ. ಆದ್ದರಿಂದ ಏಕವನ್ನು ಬಯಸುವುದು, ಏಕವನ್ನು ಪ್ರೀತಿಸುವುದು, ಏಕವನ್ನು ಆರಾಧಿಸುವುದು, ಮನಸ್ಸನ್ನು ಏಕಾಗ್ರಚಿತ್ತವಾಗಿಸುವುದು ಅದ್ವೈತ ಆತ್ಮ ದರ್ಶನದ ಮೂಲ ಮಂತ್ರ.
 



-ಅನಿರುದ್ಧ ಭಟ್ ಹಟ್ಟಿಕುದ್ರು

ಈ ಲೇಖನವು ಗೌರೀಶ್ ಬಿ ಹಾಗೂ ಕಿರಣ್ ಎ ಬಿ ಅವರೊಂದಿಗಿನ ಸಂವಾದದಿಂದ ಪ್ರೇರೇಪಿತಗೊಂಡಿದೆ.
ತಿದ್ದುಪಡಿ ಮಾಡಿದ  ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.

ಇಲ್ಲಿ ಬಳಸಿದ ಚಿತ್ರಗಳನ್ನು ಗೂಗಲ್ ಇಮೇಜ್ ನಿಂದ ಹುಡುಕಿದ ವಿವಿಧ ಜಾಲತಾಣಗಳಿಂದ ತೆಗೆದುಕೊಳ್ಳಲಾಗಿದೆ.

ವಿಜಯ ಕರ್ನಾಟಕ ,ಬೋಧಿವೃಕ್ಷದಲ್ಲಿ ೦೧.೦೨.೨೦೧೪ ರಂದು ಪ್ರಕಟವಾದ ಲೇಖನ. 
http://www.bodhivrukshaepaper.com/Details.aspx?id=830&boxid=1811893