ಶನಿವಾರ, ಮಾರ್ಚ್ 9, 2013

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು

ಕೀರ್ತನೆ

ಕರ್ನಾಟಕೀಯ ಸಂಗೀತದ ಪಿತಾಮಹ - ಪುರಂದರದಾಸ 
ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...

ಬೆಕ್ಕು ಭಕ್ಕರಿ ಮಾಡೋದ ಕಂಡೆ,
ಇಲಿಯು ಒಲೆಯ ಹಚ್ಚೋದ ಕಂಡೆ,
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆಗಾತರ... 

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 

ಕಪ್ಪೆ ಪಾತರ ಕುಣಿಯೋದ ಕಂಡೆ,
ಏಡಿ ಮದ್ದಲೆ ಬಾರಿಸೋದ ಕಂಡೆ,
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಾತರ... 

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 

ಅರಿಸಿನ ಪುಡಿಯ ಬಿತ್ತೋದ ಕಂಡೆ,
ಗಸಗಸೆಯನು ಎಣಿಸೋದ ಕಂಡೆ, 
ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ... 

 ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 




ಈ ಕೀರ್ತನೆಯನ್ನು ಕೇಳಿದ ನನಗೆ ಮೊದಲು ಬಂದ ಅನುಮಾನ, ಇದನ್ನು ಬರೆದವರು ಪುರಂದರದಾಸರೇ ಹೌದೋ ಎಂದು. ಈ ಕೀರ್ತನೆಯನ್ನು ಬರಿಗಣ್ಣಿನಿಂದ ಓದಿದರೆ ಒಂದು ಸಾಲು ಸಹ ಸಮಂಜಸವಾಗಿ ಬರೆದಂತೆ ಕಾಣುವುದಿಲ್ಲ. ಇದರ ಅರ್ಥ ತಿಳಿಯಲೇಬೇಕೆಂದು ನೆಟ್ಟನೆ ಕೂತು, ಶಿವನು ಕಾಪಿ ರೈಟ್ಸ್ ಇಟ್ಕೊಂಡಿರೋ ಜ್ಞಾನದ ಮೂರನೇ ಕಣ್ಣನ್ನು ಸ್ವಲ್ಪ ಕಾಲ ಬಾಡಿಗೆಗೆ ಪಡೆದು, ಈ ಕೀರ್ತನೆಯನ್ನು ಮತ್ತೊಮ್ಮೆ ಓದಿದೆ. ಆಗ ನನ್ನ ಒಳಗಣ್ಣಿಗೆ ಹೊಳೆದ ಇದರ ಅರ್ಥವನ್ನು ಲೇಖನ ರೂಪದಲ್ಲಿ ನಿಮಗೆ ಅರ್ಪಿಸುತ್ತಿದ್ದೇನೆ.
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು...

        ನಾಗರೀಕತೆಯ ಹುಟ್ಟಿಗೆ ಜೀವವಾದ ಸರಸ್ವತಿ ನದಿಯು ಭೂಮಿಯ ಅಡಿಗಡಿಗೇ ಕುಗ್ಗಿಹೋಗುವುದರ ಜೊತೆಜೊತೆಗೇ ನಾಗರಿಕರ ವೇದ ವಿದ್ಯೆಯೂ ಅವನತಿಯ ಹಾದಿ ಹಿಡಿದಿತ್ತು. ಸತ್ಯಯುಗದಲ್ಲಿ ಬರೀ ಬಾಯಿಂದ ಬಾಯಿಗೆ ಹಬ್ಬುತ್ತಲೇ ಬೆಳೆದುಕೊಂಡುಬಂದಿದ್ದ ವೇದ ವಿಜ್ಞಾನ, ದ್ವಾಪರಯುಗದಲ್ಲಿ ವೇದ ವ್ಯಾಸರ ದೂರದೃಷ್ಟಿಯಿಂದ ೪ ಭಾಗಗಳಾಗಿ ವಿಂಗಡನೆಗೊಂಡು, ಲಿಪಿಯ ರೂಪ ಪಡೆಯಿತು.

          ಕಲಿಯು ಇಂದ್ರನೊಡನೆ ಭಾಗೀದಾರನಾಗಿ ಕಾಮನಬಿಲ್ಲಿಗೆ ಬಾಣವನ್ನು ಬಿಗಿದು ಭೂಲೋಕಕ್ಕೆ ಬಿಟ್ಟು ತನ್ನ ಯುಗದ ಆದಿಯಲ್ಲೇ ಪ್ರಭುತ್ವವನ್ನು ಸಾಧಿಸಿಕೊಂಡನು. ವೇದ ಓದುವ ಜನರ ಕಣ್ಣಿಗೆ ಕಾಮದ ಪೊರೆ ಕಟ್ಟಿಕೊಂಡು, ನಿಜಾರ್ಥಗಳು ಮನಸ್ಸಿಗೆ ನಾಟದೆಯೇ ಸೋಸಿಹೋದವು. ಅವೈಜ್ಞಾನಿಕ ನಂಬಿಕೆ ಆಚರಣೆಗಳು ಬೆಳಕಿನ ವೇಗದಲ್ಲಿ ಹರಡಿ ಪ್ರಚಾರಗೊಂಡವು. ಮೌಢ್ಯತೆಯ ಕೊಚ್ಚೆಯಲ್ಲಿ ಕಾಲಿಟ್ಟಿದ್ದ ಜನರು, ಕೊಚ್ಚೆಯಲ್ಲಿ ವಾಸಿಸುವುದಕ್ಕೂ ಸಮರ್ಥನೆಯನ್ನು ಹುಡುಕಿಕೊಂಡರು. ಈ ಕಲಿಯುಗದಲ್ಲಿ ನಾವು ಕಲಿಯಬೇಕು, ತಿಳಿದುಕೊಳ್ಳಬೇಕು. ಮರೆತುಹೋದ ಹಿಂದಿನ ಯುಗಗಳ ಜ್ಞಾನವನ್ನು ಮತ್ತೆ ಈ ಕಲಿಯುಗದಲ್ಲಿ ಕಲಿಯುವ ಅವಕಾಶ ಇದೆ ಅನ್ನುವುದು ಹೆಚ್ಚಿನ ಜನ ಗುಂಪಿನ ಅರಿವಿಗೆ ಎಟುಕದೆ ಹೋಯಿತು. ಈ ಪರಿಸ್ಥಿತಿಯನ್ನು ಕಂಡು ನೊಂದ ದಾಸರಿಗೆ ಸ್ಪಂದಿಸಿದ ಕನ್ನಡ ಪದಗಳ ಮಾಲೆಯೇ ಈ ಕೀರ್ತನೆ. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು.

        ತರ್ಕ ಮಾಡೋದ್ರಲ್ಲಿ ಎತ್ತಿದ ಕೈ ಅನ್ನಿಸಿಕೊಂಡವರು ತಾವು ಸುಳ್ಳು ಹೇಳುವುದೇ ಇಲ್ಲ, ಸುಳ್ಳು ನಮ್ಮಲ್ಲಿ ಇಲ್ಲ ಎಂದು ವಾದಿಸಬಹುದು. ಆದರೆ ದಾಸರಿಗೆ ಅವರು ಮಾಡುತ್ತಿರೋ ವಿಗ್ರಹ ಪೂಜೆಯ ಹಿಂದಿರುವ ಭಾವನೆಗಳ ಕಟ್ಟಿನಲ್ಲಿ ಸುಳ್ಳು ಎದ್ದು ಕಾಣುತ್ತಿದೆ. ಕೃಷ್ಣನಿಗೆ (ಪರಮಾತ್ಮನಿಗೆ) ಹೃದಯದಲ್ಲಿ ಸ್ಥಾನ ಕೊಡುವ ಬದಲು, ಮನೆಯಲ್ಲಿ ಒಂದು ದೇವರ ಕೋಣೆ ಮಾಡಿ, ಅವನ ವಿಗ್ರಹ ಕೂರಿಸಿ, ಅರ್ಥವಾಗದ ಮಂತ್ರ ತಂತ್ರಗಳ ನಾನಾ ವಿಧಿವಿಧಾನದಿಂದ ಪೂಜಿಸುತ್ತಿದ್ದರು. ಈಗ ಕೂಡ ಅದು ಚಾಲ್ತಿಯಲ್ಲಿದೆ. ಈ ರೀತಿಯ ಆಚರಣೆಗಳು ನಾನಾ ಮೌಢ್ಯತೆ(ಸುಳ್ಳು)ಗಳಿಗೆ ನಲುವಾಯ್ತು. ಮಂತ್ರದ ಅರ್ಥಕ್ಕಿಂತ ಅದನ್ನು ರಾಗವಾಗಿ ಪಠಿಸುವುದೇ ಮುಖ್ಯ ಎಂದು ಪ್ರಕಟಿಸಿದರು. ಪ್ರಶ್ನಿಸುವ ಯುವ ಜನಾಂಗದ ಕೌತುಕತೆಯನ್ನು ಉದ್ಧಟತನ ಎಂದು ಕರೆದರು. ವೇದದಲ್ಲಿ ಕಾಯಕದ ಪ್ರಕಾರ ತೋರ್ಪಡಿಸಿದ ವರ್ಣ ಪದ್ಧತಿಯು ಜಾತಿ ಪದ್ಧತಿಯಾಗಿ ಬದಲಾಯ್ತು. ಮೇಲು ಕೀಳು ಭಾವನೆಗಳು ರೂಢಿಗೆಬಂದವು. ಅಸ್ಪರ್ಷ್ಯತೆಯ ವಿಷವನ್ನು ಎಲ್ಲರೂ ಕುಡಿದು, ತಮ್ಮತನವನ್ನು(ಸತ್ಯವನ್ನು) ಕೊಂದುಬಿಟ್ಟರು. ಸುಳ್ಳಿನಾಚರಣೆಯ ಹಬ್ಬ ಮಾಡಿದರು.

          ಮನಸ್ಸಿನಲ್ಲಿ ಅಸೂಯೆ, ದ್ವೇಷ, ಮತ್ಸರ ತುಂಬಿದ್ದರೂ, ಒಂದು ಕೊಡ ನೀರು ಮೈಮೇಲೆ ಹುಯ್ದುಕೊಂಡಾಕ್ಷಣ ಮಡಿತನವನ್ನು ಪಡೆಯುವ ಚಮತ್ಕಾರೀ ವಿಧಾನಗಳು ಅಳವಡಿಕೆಗೊಂಡವು. ವೇದದ ಒಂದು ಭಾಗವಾದ ಜ್ಯೋತಿ ಶಾಸ್ತ್ರವನ್ನು ಬಿಟ್ಟು ಗ್ರೀಕರು ತೋರಿದ ಜ್ಯೋತಿಷ್ಯ ಶಾಸ್ತ್ರವನ್ನು ಪಸರಿಸಿದರು. ಒಟ್ಟಿನಲ್ಲಿ ದೇವರ ಮೇಲಿರಬೇಕಾದ ಸ್ನೇಹ, ಭಕ್ತಿ ಹೋಗಿ ಭಯದ ವಾತಾವರಣ ಹುಟ್ಟಿಕೊಂಡಿತು. ಬ್ರಹ್ಮ ಕಟ್ಟಿದ ಸಪ್ತಋಷಿಗಳಿಂದ ಹುಟ್ಟಿದ ಬ್ರಾಹ್ಮಣತ್ವವೂ ಭಯವನ್ನು ಹಣವನಾಗಿಸೋ ವ್ಯಾಪಾರದ ಹಾದಿ ಹಿಡಿಯಿತು. ಮನುಷ್ಯರೊಳಗಿರೋ ದೇವರಿಗೆ (ಸತ್ಯಕ್ಕೆ) ಸ್ಪಂದಿಸೋ ಬದಲು, ಗುಡಿಗೋಪುರಗಳಲ್ಲಿ ಪಾಪ ಕಳಿಯಬೇಕೆಂದು ಹುರುಳಾಡಿದರು. ಇನ್ನೊಬ್ಬ ಮನುಷ್ಯನಿಗೆ, ಅಂದರೆ ದೇವರಿಗೆ, ಅಂದರೆ ಸತ್ಯಕ್ಕೆ ಕೇಡು ಬಯಸಿ, ದೇವರಿಗೆ (ಸುಳ್ಳಿಗೆ) ಪ್ರದಕ್ಷಿಣೆ ಹಾಕುವ ವಿಷಾದಕಾರಿ ಬೆಳವಣಿಗೆಗಳು ದಾಸರಿಗೆ ಕಂಡುಬಂದವು. ಕೃಷ್ಣ ನಮ್ಮಲ್ಲಿಲ್ಲವಯ್ಯ ಕೃಷ್ಣ ನಮ್ಮನೆ ದೇವರು. ಅಂದರೆ, ಕೃಷ್ಣ ನಮ್ಮ ಹೃದಯದಲ್ಲಿ ನೆಲೆಸಿರದಿದ್ದರೂ, ಅವನು ನಮ್ಮ ಮನೆ ದೇವರು ಮಾತ್ರ ಹೌದು.

ಯಾರೋ ಒಬ್ಬ ಆಸಾಮಿ, ನಮ್ಮ ಮನೆ ಒಲೆಯ ಒಳಗೆ ಒಂದು ಇಲಿ ಓಡಾಡ್ತಿತ್ತು ಅಂದ. ಇನ್ನೊಬ್ಬ ಆಸಾಮಿ, ನಾವು ದಿನಾ ದೇವರಿಗೆ ಮಂಗಳಾರತಿ ಮಾಡಿನೇ ಒಲೆ ಹಚ್ಚೋದು ಅಂದ. ಇದನ್ನ ಅರ್ಧಂಬರ್ಧ ಕೇಳಿಸ್ಕೊಂಡ ಮೂರನೆ ಆಸಾಮಿ, ಒಹ್ ಅವ್ರಮನೇಲಿ ದೇವರ ಪೂಜೆ ಮಾಡಿದ್ಮೇಲೆ ಗಣೇಶನ ವಾಹನ ಇಲಿ ಹೋಗಿ ಓಲೆ ಹಚ್ಚುತ್ತಂತೆ ಅಂದ. ಇದನ್ನ ಕೇಳಿದ್ ಜನ್ರು ದೇವರನ್ನ ನಾವು ಪ್ರಶ್ನಿಸೋಕಾಗುತ್ಯೇ ಅಂತ ದೊಡ್ಡ ಮನಸ್ಸಿನಿಂದ ಹಾಗೇ ನಂಬಿದ್ರು.
ಬೆಕ್ಕು ಜೋಳದ ರೊಟ್ಟಿ ಮಾಡೋದು, ಇಲಿ ಒಲೆಯ ಹಚ್ಚೋದು, ದೊಡ್ಡ ಮೆಕ್ಕೆಕಾಯಿ, ಪಾತ್ರದೊಳಗೆ ಕಪ್ಪೆ ಕುಣಿತ, ಏಡಿ ತಾಳ ಮದ್ದಲೆ ಬಾರಿಸೋದು, ಒನಕೆ ಗಾತ್ರದ ಮೆಣಸಿನಕಾಯಿ, ಅರಶಿನಪುಡಿಯನ್ನ ಬಿತ್ತೋದು, ಗಸಗಸೇನ ಲೆಕ್ಕ ಮಾಡೋದು, ಇವೆಲ್ಲಾ ಸಾಧ್ಯಾನೇ ಇಲ್ಲ ಅಂತ ಅನ್ನಿಸಿದ್ರೂ, ದೇವರ (ಸುಳ್ಳಿನ) ಹಿನ್ನೆಲೆಯನ್ನು ಕಟ್ಟಿ, ಕಥೆ ಮಾಡಿ, ಆಚರಣೆಯಲ್ಲಿ ಇರಿಸಿದ್ದಿದ್ರೆ, ನಾವೆಲ್ಲಾ ನಂಬುತ್ತಿದ್ವೋ ಏನೋ!!! ಹೀಗೂ ಉಂಟೆ ಅಂತ ಒಂದು ಉಧ್ಗಾರ ತೆಗೆದ್ರೆ, ಅದೇ ಹೆಚ್ಚು.

 ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ... 
ದೇವರು ಹಾಗಿದ್ದಾನೆ, ಹೀಗಿದ್ದಾನೆ, ಅವನ ಪಾದ ಪರ್ವತದಷ್ಟು ದೊಡ್ಡದು, ಅವನಿಗೆ ೮ ಕೈ, ವಸ್ತ್ರ ಹೀಗೇ ಇರುತ್ತೆ ಅನ್ನುವ ಯಾವುದೇ ಗೋಜಲು ಬೇಡ. ನಾವು ಮನುಷ್ಯರಾದ ಕಾರಣ ದೇವರೂ ನಮ್ಮ ಹಾಗೇ ಕಾಣಬೇಕೆಂದಿಲ್ಲ. ದೇವರು ನಮ್ಮನ್ನು ಸೃಷ್ಟಿ ಮಾಡಿದ್ದಾನೆ. ನಾವು ಅವನ ರೂಪವನ್ನೇ ಸೃಷ್ಟಿಸೋ ಗೋಜಲಿಗೆ ಇಳಿಯೋದು ಬೇಡ. ಅವನ ಸುಳ್ಳು ರೂಪವನ್ನು ಬದಿಗೊತ್ತಿ, ಅವನ ಶೂನ್ಯ ಆಕಾರವನ್ನು ಸ್ವೀಕರಿಸೋಣ. ಆತ್ಮಕ್ಕೂ, ಮೆದುಳಿನ ನಿರ್ಧಾರಗಳಿಗೂ ಹೊಂದಾಣಿಕೆಯನ್ನು ಮಾಡಿಸಿ, ಲೋಕದ ಹಿತಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪರಮಾತ್ಮನ ಶೂನ್ಯಾಕಾರವನ್ನು ನಮ್ಮೊಳಗೆ ಪ್ರತಿಷ್ಟಾಪಿಸೋಣ ಎನ್ನುವ ವಿಷಯವನ್ನು ದಾಸರು ಈ ಕೀರ್ತನೆಯ ಮೂಲಕ ನಮಗೆ ತಿಳಿಸ ಬಯಸಿದ್ದಾರೆ. (Paramaatma builds circuit by interconnecting different networks of brain, senses and aatma) ನೇರವಾಗಿ ಬೊಬ್ಬೆ ಹೊಡೆದರೂ ಆ ಕಾಲದಲ್ಲಿ ಅರ್ಥಮಾಡಿಕೊಳ್ಳದ ಜನರಿಗೆ ದಾಸರು ಈ ವ್ಯಂಗ್ಯ ಸಾಲುಗಳನ್ನು ಕಟ್ಟಿ, ಕೀರ್ತನೆಯ ರೂಪದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಸಾಗಿದರು.

ಈ ಕೀರ್ತನೆಯಲ್ಲಿ ದಾಸರು, ವಿಗ್ರಹ ಪೂಜೆಯ ವಿಷಯದಲ್ಲಿ ಅವರಿಗಿರುವ ವೈಮನಸ್ಸನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಮೂಢನಂಬಿಕೆಗಳಿಗೂ ದೇವರಮೇಲಿನ ಭಯವೇ ಕಾರಣ ಎಂದು ಸಾಧಿಸಿ ತೊರಿಸಿದ್ದಾರೆ. ದೇವರನ್ನು ಪ್ರೀತಿಸಬೇಕೆಂದು, ದೇವರ ಗುಡಿಯನ್ನು ನಮ್ಮ ಹೃದಯಲ್ಲಿ ಕಟ್ಟಲು ಪ್ರೇರೇಪಿಸುತ್ತಾರೆ. ಪ್ರತಿಯೊಂದು ಜೀವಿಯೊಳಗೂ, ವಸ್ತುವಿನೊಳಗೂ ಅಡಗಿರುವ ಪರಮಾತ್ಮನ ಸಾಂಕೇತ ಸೂಚಿಯೇ ವಿಗ್ರಹ. ಮನೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಪಟ ಇಡುವುದರಿಂದ, ಆಗಾಗ್ಗೆ ನಮ್ಮ ದೃಷ್ಟಿ ಆ ವಿಗ್ರಹದ ಮೇಲೆ ಹಾಯುತ್ತಿರುತ್ತದೆ. ಹೀಗೆ ಕಂಡಾಗಲೆಲ್ಲ ನಮ್ಮೊಳಗಿರುವ ಆತ್ಮದ ಅವಲೋಕನ ನಡಿಯಲಿ, ನಮ್ಮನ್ನು ನಾವು ದೇಹದಿಂದ, ವರ್ಣದಿಂದ, ಜಾತಿಯಿಂದ ಗುರುತಿಸಿಕೊಳ್ಳದೇ, ಆತ್ಮದ ಮಟ್ಟದಲ್ಲಿ ಗುರುತಿಸಿಕೊಳ್ಳೋಣ. ನನ್ನಲ್ಲಿ ಇರುವ ಆತ್ಮ, ಅವನಲ್ಲೂ ಇದೆ. ಆ ಪ್ರಾಣಿಯಲ್ಲೂ ಇದೆ, ಕೀಟದಲ್ಲೂ ಇದೆ ಎಂದು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನೂ ಗುರುತಿಸೋಣ ಎಂದು ದಾಸರು ಈ ಕೀರ್ತನೆಯಲ್ಲಿ ಕರೆ ನೀಡಿದ್ದಾರೆ.
ಸುಳ್ಳು ನಮ್ಮೆಡೆ ಸುಳಿಯದಿರಲಿ, ಸತ್ಯವಾಗಲಿ ನಮ್ಮನೆ ದೇವರು ...

-ಅನಿರುದ್ಧ ಭಟ್ ಹಟ್ಟಿಕುದ್ರು

೨೧-೧೨-೨೦೧೩ ರಂದು ಬೋಧಿವೃಕ್ಷದಲ್ಲಿ (ವಿಜಯ ಕರ್ನಾಟಕದ ವಾರಪತ್ರಿಕೆ ) ಪ್ರಕಟಗೊಂಡ ಲೇಖನ.
http://www.bodhivrukshaepaper.com/Details.aspx?id=775&boxid=194953156



References (ಉಲ್ಲೇಖ ಗ್ರಂಥ):
1. Secret teachings of Vedas by Stephen Knapp.

8 ಕಾಮೆಂಟ್‌ಗಳು:

  1. ಭಟ್ರೇ ಅಲ್ಲಿ ಪಾತರ ಎಂಬುದಕ್ಕೆ ಅರ್ಥ ಪಾತ್ರವಲ್ಲ , "ಕುಣಿಯುವವಳು (Dancer )" ಎಂದು . ಏಡಿ ಮದ್ದಳೆ ಬಾರಿಸುವಾಗ ಕಪ್ಪೆ ಕುಣಿಯುತಿತ್ತು ಅಂತ ಅದರ ಅರ್ಥ. (ನೋಡಿ :" ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ"........)

    ಪ್ರತ್ಯುತ್ತರಅಳಿಸಿ
  2. ನ್ಯೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಇದು ಮುಂಡಿಗೆ ದಾಸರ ಪದ. ಇಲ್ಲಿ ಮೇಲಿನ ಅರ್ಥವಲ್ಲ, ಒಳಗಗಿನ ಅರ್ಥವನ್ನು ಅರ್ಥ ಮಾಡ್ಕೋಬೇಕು.

    ಪ್ರತ್ಯುತ್ತರಅಳಿಸಿ
  3. ಈ ನಾಸ್ತಿಕ ಅನಿರುದ್ಧ ಪುರಂದರದಾಸರ ಭಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ .ಮತ್ತು ಪದ್ಯದ ಪದಗಳನ್ನೂ ಸಹ ಸರಿಯಾಗಿ ಬರೆಯಲಾರದ ದಡ್ಡನಾಗಿದ್ದಾನೆ .

    ಪ್ರತ್ಯುತ್ತರಅಳಿಸಿ