ಭಾನುವಾರ, ಮಾರ್ಚ್ 23, 2014

ಬಿಂದು ಸ್ಮೃತಿ



ಯಾವುದೋ ದಪ್ಪದ ಕಾಗದದಲ್ಲಿ ಒಂದು ವೃತ್ತ ಇತ್ತು. ಆ ವೃತ್ತದೊಳಗೊಂದು ಬಿಂದು ಆವೃತ್ತಿಯಾಗಿತ್ತು. ಆ ಬಿಂದುವು ವೃತ್ತದ ಕೇಂದ್ರಬಿಂದುವಾಗಿತ್ತು. ಕೇಂದ್ರ ಸ್ಥಾನದ ಹೆಮ್ಮೆಯಿಂದ ಬಿಂದು ಎಂದೂ ವೃತ್ತದಾಚೆ ಇಣುಕಿ ನೋಡುವ ಪ್ರಯತ್ನವನ್ನೇ ಮಾಡಿರಲಿಲ್ಲ. ಅದೊಂದು ದಿನ ಯಾವುದೋ ಘಳಿಗೆಯಲ್ಲಿ ಬಿಂದುಗೆ ತನ್ನ ವೃತ್ತದಾಚೆ ಏನಿದೆ ಎಂದೊಮ್ಮೆ ಇಣುಕಿ ನೋಡುವ ಆಸೆ ಆಯ್ತು. ಆ ಆಸೆಯ ಆಜ್ಞೆಯ ಮೇರೆಗೆ ಬಿಂದು ಚಲಿಸಲು ಆರಂಭಿಸಿತು. ಆದರೆ ಬಿಂದು ಚಲಿಸಿದಂತೆಲ್ಲಾ, ವೃತ್ತವೂ ಅದರೊಂದಿಗೇ ಚಲಿಸಲಾರಂಭಿಸಿತು.


ಕಾಲ ಉರುಳುತ್ತಿದ್ದಂತೆಯೇ ಬಿಂದು ಚಲಿಸುತ್ತಿದ್ದ ಕಾಗದ ತೆಳ್ಳಗಾಗಿ ಹರಿಯುವ ಸ್ಥಿತಿ ತಲುಪಿತು. ಬೇಸತ್ತ ಬಿಂದುವಿನ ಪುಣ್ಯಕ್ಕೆ ಅದರ ಕೊನೆಗಾಲದಲ್ಲಿ ಅದರಷ್ಟೇ ಸ್ಥಾನ ಮಾನವಿರುವ ಇನ್ನೊಂದು ಚುಕ್ಕಿಯನ್ನು ಭೇಟಿ ಮಾಡುವ ಅವಕಾಶ ದೊರಕಿತು. ಈ ಚುಕ್ಕಿ ಸಹ ಒಂದು ವೃತ್ತದ ಕೇಂದ್ರ ಸ್ಥಾನದಲ್ಲಿ ನೆಲೆಸಿತ್ತು. ಬಿಂದು ವೃತ್ತವನ್ನು ತನ್ನೊಂದಿಗೆ ಎಳೆದುಕೊಳ್ಳುತ್ತಾ ಚುಕ್ಕಿಯ ಜೊತೆಗೆ ಮಾತನಾಡಲು ಮುಂದಾಯಿತು. ಆದರೆ ಅದರ ಆಶ್ಚರ್ಯಕ್ಕೆ ಆ ಚುಕ್ಕಿ ಸ್ವತಂತ್ರವಾಗಿ ನಡೆದು ಅದನ್ನು ಆವರಿಸಿದ ವೃತ್ತದಿಂದ ಹೊರಗೆ ಬರುವುದನ್ನು ಬಿಂದು ಗಮನಿಸಿತು. ಚುಕ್ಕಿ ತನಗೆ ಮನಬಂದಂತೆ ಚಲಿಸುತ್ತಿತ್ತು. ತನಗೆ ಬೇಕಾದಾಗ ವಾಪಸ್ಸು ಹೋಗಿ ಆ ವೃತ್ತದ ಕೇಂದ್ರವನ್ನು ಅಲಂಕರಿಸುತ್ತಿತ್ತು. ಕುತೂಹಲ ತಡೆಯಲಾರದೆ ಬಿಂದು ಚುಕ್ಕಿಯನ್ನು ಸಮೀಪಿಸಿ ಕೇಳುತ್ತದೆ, ‘ನಾನು ನನ್ನ ಜೀವನ ಪರ್ಯಂತ ನನ್ನ ವೃತ್ತದ ಹೊರಗಿಣುಕಿ ನೋಡುವ ಪ್ರಯತ್ನ ಮಾಡುತ್ತಿದ್ದೇನೆ. ನಡೆದು ನಡೆದು ಈ ಕಾಗದವೇ ಸವೆದು ಹೋಯ್ತೇ ಹೊರತು, ವೃತ್ತವನ್ನು ಹೊರತುಪಡಿಸಿ ಒಂದು ಹೆಜ್ಜೆಯಿಡಲೂ ಸಾಧ್ಯವಾಗಿಲ್ಲ. ಇದು ನನ್ನ ಜೀವದಲ್ಲಿ ಫಲಿಸದಿರುವ ಯೋಗವೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ ಆದರೆ ಈಗ ನಿನ್ನನ್ನು ನೋಡಿದ ನನಗೆ ಒಂದೆಡೆ ಖುಷಿ, ಒಂದೆಡೆ ಆಶ್ಚರ್ಯ. ನೀನು ಈ ವೃತ್ತದ ಕೇಂದ್ರ ಸ್ಥಾನವನ್ನು ಹೊಂದಿದ್ದೂ ಸಹ, ಇದರಿಂದ ಬಲು ಉಚಿತವಾಗಿ ವಿಹರಿಸುತ್ತಿದ್ದೀ. ಇದು ಹೇಗೆ ಸಾಧ್ಯ?
ಸ್ವಲ್ಪ ಕಾಲ ಮೌನದಲ್ಲೇ ಮುಗುಳ್ನಗೆಯ ಡೊಂಕುಗೆರೆ ಬಿಡಿಸಿದ ಚುಕ್ಕಿ, ಬಿಂದು ಕೇಳಿದ ಪ್ರಶ್ನೆಗೊಂದು ಮರು ಪ್ರಶ್ನೆ ಒಡ್ಡಿತು. ಯಾರು ನೀನು?’
ಬಿಂದುನನ್ನ ಹೆಸರು ಬಿಂದು. ನಾನು ಈ ವೃತ್ತದ ಕೇಂದ್ರಬಿಂದು
ಚುಕ್ಕಿ, ‘ಇದು ನನ್ನ ಪ್ರಶ್ನೆಯ ಉತ್ತರವೋ ಅಥವಾ ನಿನ್ನ ಪ್ರಶ್ನೆಗೆ ನೀನೇ ಉತ್ತರಿಸುತ್ತಿರುವುದೋ?’
ಬಿಂದು, ‘ಅರೆ ಇದು ನಿನ್ನ ಪ್ರಶ್ನೆಗೆ ನಾ ಕೊಟ್ಟ ಉತ್ತರ. ನನ್ನ ಪ್ರಶ್ನೆಗೆ ಉತ್ತರ ತಿಳಿದಿಲ್ಲವಾದ್ದರಿಂದ ತಾನೇ ನಿನ್ನನ್ನು ಕೇಳುತ್ತಿರುವುದು...’
ಚುಕ್ಕಿ, ‘ವೃತ್ತ ಇರುವುದು ನಿನ್ನ ಹೊರಗಲ್ಲ. ನಿನ್ನ ಹೊರಗಡೆ ಇದ್ದಿದ್ರೆ ನಿನ್ನ ಪ್ರಶ್ನೆಗೆ ನಾನೇ ಉತ್ತರಿಸಿಬಿಡುತ್ತಿದ್ದೆ. ಈ ವೃತ್ತ ಇರುವುದು ನಿನ್ನೊಳಗೆ. ನಿನ್ನ ಮನಸ್ಸಿನಲ್ಲಿ ಜನಿಸಿದ ಆಲೋಚನೆಯ ಸರಪಣಿಯೇ ಈ ವೃತ್ತ. ವೃತ್ತದ ತ್ರಿಜ್ಯ ಪರಿಧಿಗಳು ನಿನ್ನ ಅಧಿಕಾರದ ಕಲ್ಪನೆಗಳು. ಎಲ್ಲಿಯತನಕ ನೀನು ಈ ವೃತ್ತದ ತ್ರಿಜ್ಯ ಪರಿಧಿಗಳನ್ನು ಅಳತೆ ಮಾಡುತ್ತಿರುತ್ತೀಯೋ, ಅಲ್ಲಿಯವರೆಗೆ ನಿನಗೆ ಈ ವೃತ್ತದಿಂದ ಹೊರಗಡೆ ಬರಲು ಸಾಧ್ಯವಿಲ್ಲ. ನಮ್ಮ ಸುತ್ತಲೂ ಅಮೂರ್ತವಾದ ಅಸಂಖ್ಯ ವೃತ್ತಗಳಿವೆ. ನಾವು ಆ ವೃತ್ತದ ವ್ಯಾಪ್ತಿಯನ್ನು ಅಳೆಯಲು ಶುರುಮಾಡಿದರೆ, ಅದು ನಮ್ಮನ್ನು ಆವೃತ್ತಿಸುತ್ತದೆ. ಈ ವೃತ್ತಗಳು ಬರಿಯ ಆಲೋಚನೆಗಳು. ಈ ಆಲೋಚನೆಗಳು ಅವೃತ್ತಿಸುವುದು ಮಾತ್ರವೇ ಅಲ್ಲದೆ ನಮ್ಮನ್ನು ಆಲೋಚನೆಗಳ ಕೇಂದ್ರ ಭಾಗದಲ್ಲಿ ಕೂರಿಸಿ ನಮಗೆ ಲೌಕಿಕ ಸನ್ಮಾನವನ್ನು ನೀಡುತ್ತವೆ. ನಾವು ಅದೇ ಗುಂಗಿನಲ್ಲಿ, ಅದೇ ಮಾಯಾಚಕ್ರದ ನಟ್ಟ ನಡುವಿನಲ್ಲಿ ಬಿಡಾರ ಹೂಡಿಬಿಡುತ್ತೇವೆ.
          ನಿನ್ನನ್ನು ನಿನ್ನ ಆಲೋಚನೆಗಳು, ಕಲ್ಪನೆಗಳು ಬಂಧಿಸಿವೆ. ಎಲ್ಲವನ್ನೂ ಅಳತೆ ಮಾಡುವ ನಿನ್ನ ಮನಸ್ಸು ನಿನ್ನ ಬಂಧಿಸಿದೆ. ನಿನ್ನನ್ನು ನೀನೆ ಬಂಧಿಸಿಕೊಂಡಿರುವೆ. ನಿನ್ನ ಮನಸ್ಸಿಗೆ ನಾ ಕೊಡುವ ಇನ್ನೊಂದು ಹೆಸರು ಅಳತೆ ಮಾಪನ. ಯಾಕೆಂದರೆ ಎಲ್ಲವನ್ನೂ ಅಳೆಯಲು ಯತ್ನಿಸುತ್ತದೆ ನಿನ್ನ ಮನಸ್ಸು. ಅಳತೆಯ ಫಲಿತಾಂಶದಿಂದಲೇ ನಿನಗೊಂದು ಗುರುತು. ಅಳತೆಯ ಫಲಿತಾಂಶದಿಂದ ನಿನ್ನ ಸುತ್ತ ನಾನು, ನನ್ನದು, ನನ್ನದಲ್ಲದ್ದು ಎಂಬ ಬ್ರಹ್ಮಾಂಡದ ಸೃಷ್ಟಿ ಆಗಿದೆ. ಈ ಅಳತೆಯಿಂದಲೇ ನೀನು ಸಮಯ ಹಾಗೂ ಜಾಗದ ಮಿತಿಗೆ ಒತ್ತಿಕೊಂಡಿರುವೆ.
          ನಿನ್ನ ಅಕ್ಕಪಕ್ಕದಲ್ಲಿರುವ ಬಿಂದುಗಳನ್ನು ನೀನು ಗಮನಿಸಿದ್ದೀಯಾ? ಇಲ್ಲ. ಯಾಕೆಂದರೆ ಅವುಗಳು ನಿನಗಿಂತ ಕೀಳು ಸ್ಥಾನದಲ್ಲಿವೆ ಎಂಬುದು ನಿನ್ನ ಭಾವನೆ. ನಿಜ ಏನೆಂದರೆ, ನಿನ್ನ ವೃತ್ತದ ಕೇಂದ್ರ ಸ್ಥಾನ ಆಗಿರದಿದ್ದರೂ ಆ ಬಿಂದುಗಳು, ಅವುಗಳದ್ದೇ ಆದ ವೃತ್ತದ ಕೇಂದ್ರ ಸ್ಥಾನದಲ್ಲಿ ಮೆರೆದಾಡುತ್ತಿವೆ. ಹೀಗೆ ಈ ಕಾಗದದ ಪ್ರತಿಯೊಂದು ಬಿಂದುವೂ ಅವುಗಳದ್ದೇ ವೃತ್ತದಲ್ಲಿ ಆವೃತ್ತಿಯಾಗಿವೆ. ಅವರವರ ಆಲೋಚನೆಯ ಕೇಂದ್ರದಲ್ಲೇ ಅವುಗಳು ಸ್ಥಿತವಾಗಿವೆ, ಅಷ್ಟರಲ್ಲೇ ಅವುಗಳ ಮಿತಿ ಸೀಮಿತವಾಗಿದೆ. ಇಲ್ಲಿ ನೀನೊಬ್ಬನೇ ಅಲ್ಲ. ನಿನ್ನದೊಂದು ದೊಡ್ಡ ಗುಂಪೇ ಇದೆ.
ನಾನು ಆ ವೃತ್ತದ ವ್ಯಾಪ್ತಿಯನ್ನು ಎಂದೂ ಅಳತೆ ಮಾಡಿಲ್ಲ. ನಾನು ಈ ಜೀವನದ ಕಾಗದದಲ್ಲಿ ಒಂದು ಚುಕ್ಕಿಯೇ ಹೊರತು, ಯಾವುದೇ ವೃತ್ತದ ಕೇಂದ್ರ ಬಿಂದು ಅಲ್ಲ. ನೀ ನನ್ನ ಸುತ್ತ ಕಂಡ ಈ ವೃತ್ತ ನನ್ನನ್ನು ಹೊರಗಿನಿಂದ ಆವರಿಸಿದೆ. ಆದರೆ ನೀ ಸಿಲುಕಿಕೊಂಡಿರುವ ವೃತ್ತ ನಿನ್ನನ್ನು ಒಳಗಿನಿಂದ ಆವರಿಸಿದೆ. ಇದಕ್ಕೆ ಉತ್ತರ ನಿನ್ನ ಒಳಗಿನಿಂದಲೇ ಬರಬೇಕೇ ಹೊರತು, ನಾನು ಉತ್ತರಿಸಲು ಸಾಧ್ಯವಿಲ್ಲ.
ನನಗೆ ಈ ಕಾಗದ ಹರಿದುಹೋಗುತ್ತಿದೆ ಎಂಬುದು ದುಃಖ ತರುತ್ತಿಲ್ಲ. ಏಕೆಂದರೆ ಯಾವುದೇ ಹೆಸರಿಲ್ಲದ ಈ ಚುಕ್ಕಿ ಕಾಗದವನ್ನು ಮೀರಿ ಬದುಕಬಲ್ಲುದು. ನಾನು ಅವಿನಾಶ. ನನ್ನನ್ನು ಸಮಯ ಅಥವಾ ಜಾಗದ ನಿಟ್ಟಿನಿಂದ ಅಳೆಯಲು ಸಾಧ್ಯವಿಲ್ಲ. ಆದರೆ ಈ ಕಾಗದ ಹರಿಯುವ ಮುನ್ನ ನೀನು ಈ ವೃತ್ತದಿಂದ ನಿವೃತ್ತಿ ಹೊಂದಿ, ಈ ಜೀವನವೆಂಬ ಕಾಗದವನ್ನು ಗಮನಿಸಬೇಕು. ಇದೇ ನನ್ನ ಆಶಯ. ಇದನ್ನು ನೀನು ಅರಿಯುವ ಮುನ್ನವೇ ಈ ಕಾಗದ ಹರಿದು ಹೋದರೂ ಚಿಂತೆ ಇಲ್ಲ. ಈ ಕಾಗದವನ್ನು ನೀನು ಪುನಃ ಉಪಯೋಗಿಸಬಹುದು. ಎಂದು ಹೇಳಿ ಚುಕ್ಕಿ ಹೊರಟು ಹೋಗುತ್ತದೆ.
ಆ ನಂತರ ಆ ಕಾಗದ ಹರಿದುಹೋಗಿ, ಅದನ್ನು ಪುನಃ ಸಂಸ್ಕರಿಸಿದ ನಂತರ ತೆಳುವಾದ ಹಾಳೆಯಾಗಿ ಮಾರುಕಟ್ಟೆಗೆ ಬಂದಿತು. ಅದನ್ನು ಕೊಂಡುಕೊಂಡ ಒಬ್ಬ ಪ್ರಾರ್ಥಮಿಕ ವಿಧ್ಯಾರ್ಥಿ ಕೈವಾರ ತಗೊಂಡು ಆ ಹಾಳೆಯ ಮೇಲೆ ವೃತ್ತ ಬಿಡಿಸುವ ಅಭ್ಯಾಸ ಮಾಡುತ್ತಿದ್ದ. ಹಿಂದಿನ ಕಾಗದದಲ್ಲಿ ಚುಕ್ಕಿ ಮಾಡಿದ ಬೋಧನೆಯಿಂದ ಈ ವಿದ್ಯಾರ್ಥಿ ಅಭ್ಯಾಸ ಮಾಡುತ್ತಿದ್ದ ವೃತ್ತದೊಳಗೆ ಕೈವಾರ ಮುಳ್ಳಿನ ಚುಕ್ಕಿಯ ಅಚ್ಚಿತ್ತೇ ಹೊರತು ಪೆನ್ಸಿಲ್ ಗ್ರಾಫೈಟ್ ನ ಬಿಂದು ಗುರುತು ಇರಲಿಲ್ಲ. ಆದರೆ ಕೇಂದ್ರಬಿಂದುವನ್ನು ಸೂಚಿಸದಿದ್ದರೆ ಗುರುಗಳು ಬಯ್ಯುತ್ತಾರೆಂದು, ವೃತ್ತ ಬರೆದ ಮೇಲೆ ಆ ಕೈವಾರದ ಚುಕ್ಕಿಯ ಅಚ್ಚಿನ ಮೇಲೊಂದು ಗ್ರಾಫೈಟ್ ಬಿಂದುವನ್ನು ಒತ್ತಾಯಪೂರ್ವಕ ಇಡಲಾಯಿತು.

-ಅನಿರುದ್ಧ ಭಟ್ ಹಟ್ಟಿಕುದ್ರು

-ವಿವರಣಾತ್ಮಕ ಚಿತ್ರವನ್ನು ಬಿಡಿಸಿಕೊಟ್ಟ ಸುದರ್ಶನ್ ಕೆ ಪಿ  ಅವರಿಗೆ ಧನ್ಯವಾದಗಳು .

-ಫೆಬ್ರವರಿ ೨೨ನೇ ತಾರೀಖಿನ ವಿಜಯ ಕರ್ನಾಟಕದ ಬೋಧಿವೃಕ್ಷದಲ್ಲಿ ಪ್ರಕಟಗೊಂಡ ಲೇಖನ. http://www.bodhivrukshaepaper.com/Details.aspx?id=855&boxid=183413189





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ