ಶನಿವಾರ, ಡಿಸೆಂಬರ್ 7, 2013

ಭಗವಂತ ಶೂನ್ಯವೋ ಅನಂತವೋ?


ಭಗವಂತ ಇದ್ದಾನೋ ಇಲ್ಲವೋ ಎಂದು ಗೌತಮ ಬುದ್ಧನನ್ನು ಪ್ರಶ್ನಿಸಿದಾಗಲೂ ಅವರು ಅದಿಕ್ಕೆ ಉತ್ತರಿಸದೇ ಸುಮ್ಮನಾಗಿಬಿಟ್ಟಿದ್ದರಂತೆ. ಅಂದಮೇಲೆ ನಾನು ಉತ್ತರಿಸುತ್ತೇನೆಂದು ಭಂಡ ಧೈರ್ಯ ಮಾಡಿದರೆ ಅದು ಉದ್ಧಟತನವೇ ಆದೀತು. ಇಲ್ಲಿಯ ನನ್ನ ಮಂಡನೆ ಭಗವಂತ ಇದ್ದಾನೋ ಇಲ್ಲವೋ ಎಂಬುದಲ್ಲ. ಆದರೆ ಭಗವಂತ ಶೂನ್ಯವೋ ಅನಂತವೋ ಎಂಬುದು. ಎಲ್ಲಾ ಒಂದೇ ಅಂತೀರಾ? ಇರಿ ಒಂದು ನಿಮಿಷ. ಮೊದಲಿಗೆ ಭಗವಂತ ಎಂಬ ಪದದ ಅರ್ಥ ತಿಳಿಯೋ ಒಂದು ಚಿಕ್ಕ ಪ್ರಯತ್ನವನ್ನು ನಿಮ್ಮ ಜೊತೆ ಹಂಚ್ಕೊತೀನಿ.


          ನಾವು ಇಂಗ್ಲಿಷ್ ಶಬ್ದಕೋಶವನ್ನು ತೆಗೆದು ನೋಡಿದರೆ, ಸಾಮಾನ್ಯವಾಗಿ ಪದದ ಅರ್ಥದ ಜೊತೆಗೆ ಅದರ ಹುಟ್ಟಿನ ಬಗ್ಗೆ ಸೂಚಿಸಿರುತ್ತಾರೆ. ಪದದ ಗಾಢವಾದ ಅರ್ಥ ತಿಳಿಯಬೇಕೆಂದರೆ, ಅದರ ಮೂಲಹುಟ್ಟು ಅರಿಯುವುದು ಅತ್ಯವಶ್ಯಕ. ಉದಾಹರಣೆಗೆ “ಜಗತ್” ಎಂಬ ಪದ. ಬಹಳ ಆರಾಮಾಗಿ ನಾವು ಜಗತ್ ಎಂದರೆ ಪ್ರಪಂಚ, ವರ್ಲ್ಡ್(world) ಎಂದು ಹೇಳಿಬಿಡಬಹುದು. ಆದರೆ ಅದು ಅಷ್ಟು ಸುಲಭದ ಪದವಲ್ಲ.
ಜಗತ್ = ಜ + ಗತ್. ಜ = ಜನಿಸಿದ (produced by),   ಗತ್ = ಚಲನೆ.
ಜಗತ್ ಎಂದರೆ “ಚಲನೆಯಿಂದ ಹುಟ್ಟಿದ” ಅಥವಾ “ಚಲನೆಯಲ್ಲಿರುವಂತೆ ಕಾಣುವ”  ಎಂದರ್ಥ. ಈ ಅರ್ಥ ತಿಳಿದಮೇಲೆ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ, ಎಂದು ಇಷ್ಟುದ್ದದ ವಾಕ್ಯ ಮಾಡುವ ಅವಶ್ಯಕತೆಯೇ ಇಲ್ಲ. ಜಿಯಾಗ್ರಫಿ (geograpgy) ಯನ್ನು ಭೂಗೋಳ ಶಾಶ್ತ್ರ ಎಂದು ಕರೆಯುವ ನಾವು ಭೂಮಿ ಉರೂಟವಾಗಿದೆ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಇದು ನಮ್ಮ ಭರತ ಖಂಡದ ಅತಿ ಪ್ರಾಚೀನ ಭಾಷೆಗಳ ಗಮ್ಮತ್ತು ಎನ್ನಬಹುದು.


          ಹೀಗೆಯೇ ಭಗವಂತ ಎಂಬ ಪದದ ಅರ್ಥ ತಿಳಿಯುವ ಸಲುವಾಗಿ ನಾನಾ ರೀತಿಯಲ್ಲಿ ಭಗವಂತನನ್ನು ಬಿಡಿಸಿ ನೋಡುತ್ತಿದ್ದೆ. ಒಂದು ವಿಭಜನೆ ಸಾಹಿತ್ಯದ ವಿಧಿಗಳನ್ನು ಒಳಗೊಂಡಿಲ್ಲವಾದರೂ, ತುಂಬಾ ಸೂಕ್ತವಾದದ್ದು ಅನ್ನಿಸ್ತು.
ಭಗವಂತ = ಭ + ಗ + ವಂತ
ಭ = ಭೂಮಿ, ಗ = ಗಗನ, ವಂತ = ಹೊಂದಿದವ.
ಭಗವಂತ = ಭೂಮಿಯನ್ನು, ಗಗನವನ್ನೂ ಹೊಂದಿದವನು.
ಗಾಯತ್ರಿ ಮಂತ್ರದಲ್ಲಿ ಬರುವ “ಓಂ ಭೂರ್ ಭುವ ಸ್ವಹ” ಎಂಬ ಸಾಲು ಸಹ ಭಗವಂತನ ಈ ವ್ಯಾಖ್ಯಾನಕ್ಕೆ ಪ್ರಾಧ್ಯಾನ ನೀಡಿದೆ. ಭೂರ್ = ಭೂಮಿ, ಭುವ = ಸೌರಮಂಡಲ, ಸ್ವಹ = ನಕ್ಷತ್ರಮಂಡಲ. ಓಂ ಭೂರ್ ಭುವ ಸ್ವಹ = ಓ ಭೂಮಿ ಸೂರ್ಯ ನಕ್ಷತ್ರ ಮಂಡಲದ ಒಡೆಯನೇ. ಅಲ್ಲಿಗೆ ಭಗವಂತ ಎಂದರೆ ಭೂಮಿಯನ್ನು ಹಾಗೂ ಗಗನವನ್ನು ತನ್ನ ಹತೋಟಿಯಲ್ಲಿ ಇಟ್ಟು ಕೊಂಡವನು ಆನ್ನೋ ಅರ್ಥ ವೈಜ್ಞಾನಿಕವಾಗಿ ಎಷ್ಟು ಸಮಂಜಸವಾದದ್ದು? ಗುರುತ್ವಾಕರ್ಷಣ ಬಲ ಇದೆ ಎಂದು ಮನುಷ್ಯ ಕಂಡುಹಿಡಿದನೇ ಹೊರತು, ಗುರುತ್ವಾಕರ್ಷಣ ಬಲವನ್ನು ಸೃಷ್ಟಿಸಿದವನು ಮನುಷ್ಯನಲ್ಲ. ಅಲ್ಲಿಗೆ ಈ ಭೂಮಿಗೂ, ಅಂತರಿಕ್ಷಕ್ಕೂ ಕೆಲವು ನಿಭಂದನೆಗಳನ್ನು ಅಳವಡಿಸಿ, ಅವುಗಳ ಸಸೂತ್ರವಾದ ಚಲನವಲನಗಳನ್ನು ಪರಿವೀಕ್ಷಿಸುತ್ತಿರೋ ಯಾವುದೋ ಒಂದು ಅಗೋಚರ ಶಕ್ತಿ ಇದೆ ಎಂದು ಪ್ರತಿಯೊಬ್ಬ ಮನುಷ್ಯನೂ ಒಪ್ಪಬೇಕಾದಂತ ವಾದ. ಭಗವಂತ ಎಂಬ ಪದದ ಅರ್ಥವೂ ಇದೇ ವಾದವಾಗಿದೆ.

      ಭಗವಂತ ಶೂನ್ಯವೋ ಅನಂತವೋ... ವಸ್ತುಗಳು ಅಣುಗಳಿಂದ ಮಾಡಲ್ಪಟ್ಟಿದೆ. ಅಣುಗಳನ್ನು ಒಡೆದರೆ ಪರಮಾಣುಗಳು ಸಿಗುತ್ತವೆ. ಪರಮಾಣುಗಳನ್ನು ಒಡೆದರೆ ಇನ್ನೂ ಹೆಸರಿಡದ ಪರಮಪರಮ ಅಣುಗಳು ದೊರಕಬಹುದು (microscopic approach). ಹೀಗೇ ತುಣುಕಾಗಿಸುವ ಈ ಪ್ರಕ್ರಿಯೆಯಲ್ಲಿ ಯಾವುದೋ ಒಂದು ಹಂತ ತಲುಪಿ, ತುಣುಕಾಗಿಸಲು ಹೊರಟ ಆ ಕಣವೇ ಇಲ್ಲದಂತಾಗಿ ಹೋಗಿಬಿಡುತ್ತದೆ. ವಸ್ತು ವಿಭಜನೆ ಶೂನ್ಯದಲ್ಲಿ ಕೊನೆಗೊಂಡರೆ, ಆ ವಸ್ತುವು ಶೂನ್ಯದಿಂದ ಮಾಡಲ್ಪಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಅಲ್ಲಿಗೆ, ಇಡೀ ಪ್ರಪಂಚವೇ ಶೂನ್ಯದಿಂದ ಮಾಡಲ್ಪಟ್ಟಿದೆ ಅನ್ನೋ ಅರ್ಥ ಕಲ್ಪಿತಗೊಳ್ಳುತ್ತದೆ. ಶೂನ್ಯ ಪ್ರತಿಯೊಂದು ವಸ್ತುವಿನಲ್ಲೂ ಇದೆ, ಪ್ರತಿಯೊಂದು ವಸ್ತುವೂ ಶೂನ್ಯದಿಂದ ಮಾಡಲ್ಪಟ್ಟಿವೆ. ಶೂನ್ಯ ಈ ಜಗತ್ತಿನಲ್ಲಿದೆ, ಶೂನ್ಯ ಗಗನದಲ್ಲಿದೆ, ಅಂತರಿಕ್ಷದಲ್ಲಿದೆ. ಅರೆ! ಶೂನ್ಯವು ನಾವು ಹಿಂದೆ ನೋಡಿದ ಭಗವಂತನ ವ್ಯಾಖ್ಯೆಗೆ ಸರಿಹೊಂದುತ್ತಿದೆಯಲ್ಲಾ. ಭೂಮಿ ಗಗನ ಶೂನ್ಯದಿಂದ ಹುಟ್ಟಿ, ಶೂನ್ಯದೊಳಗೇ ಅಡಕವಾಗಿದೆ. ಶೂನ್ಯವು ಒಂದು ಅಗೋಚರ ಶಕ್ತಿಯಂತೆ ಪ್ರತಿಯೊಂದು ಅಣುವನ್ನೂ, ವಸ್ತುವನ್ನೂ, ಭೂಮಿಯನ್ನೂ, ಗಗನವನ್ನೂ ಆಳುತ್ತಿದೆ. ಹಾಗಾದರೆ ಶೂನ್ಯವನ್ನು ಭಗವಂತನೆಂದು ಕರೆಯುವುದೋ, ಇಲ್ಲ ಭಗವಂತನನ್ನೇ ಶೂನ್ಯವೆಂದು ಕರೆಯುವುದೋ?

          ಭಗವಂತ ಶೂನ್ಯವೋ ಅನಂತವೋ... ನಾವು ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳ ಮಟ್ಟಕ್ಕೆ ತಲುಪುತ್ತಿದ್ದಂತೆ, ಭೂಮಿಯಲ್ಲಿನ ದೊಡ್ಡದೊಡ್ಡ ಕಟ್ಟಡಗಳು ಚಿಕ್ಕಚಿಕ್ಕ ಆಯತಗಳಾಗಿ ಕಾಣಿಸುತ್ತವೆ. ನಮಗೆ ಭೂಮಿಯಿಂದ ಇನ್ನೂ ದೂರ ಕ್ರಮಿಸಲು ಸಾಧ್ಯವಾದಲ್ಲಿ, ಭೂಮಿಯೊಂದು ಅಗಲ ಸೊಂಟದ ಉರೂಟ ಗೊಲಿಯಂತಿದ್ದುದು ಕಾಣಬಹುದಾಗಿತ್ತು. ಇನ್ನೂ ದೂರ ಕ್ರಮಿಸಿದರೆ ಸೂರ್ಯಮಂಡಲ ಆಮೇಲೆ ನಕ್ಷತ್ರಮಂಡಲ (macroscopic approach). ಮತ್ತಷ್ಟು ದೂರಕ್ರಮಿಸಿದರೆ? ಅಂತರಿಕ್ಷಕ್ಕೂ ಮಿಗಿಲಾಗಿ ಯಾವುದೇ ಅಂತರವೂ (ಜಾಗವೂ, space) ಇಲ್ಲವೇ? ಅಂತರಕ್ಕೆ ಮಿಗಿಲಾದ ಅಂತರವನ್ನು ಅರಿಯಲು ಯಾವ ಅಭಿಯಂತರವನ್ನು ಬಳಸುವುದು? ಅಂತರ ಇದ್ದೂ ಸಹ ಅದು ಅಳೆಯಲಾಗದೆ ಅನಂತವಾಗಿದೆ (infinite). ಅನಂತವೆಂಬುದೂ ನಮ್ಮ ಗ್ರಹಣಸಾಮರ್ಥ್ಯಕ್ಕೆ ಮೀರಿದ ಅಗೋಚರ ಶಕ್ತಿ. ಒಂದು ವಸ್ತುವಿನಲ್ಲಿ ಅವಿತಿರುವ ಅಣುಗಳ ಸಂಖ್ಯೆ ಅನಂತ. ಅಂತರಿಕ್ಷದ ವಿಸ್ತೀರ್ಣ ಅನಂತ. ಅಲ್ಲಿಗೆ ಅನಂತವೆಂಬುದು ಈ ಜಗತ್ತಿನಲ್ಲಿದೆ, ಗಗನದಲ್ಲಿದೆ. ಬಲು ಆಶ್ಚರ್ಯದಾಯಕವಾಗಿ ಅನಂತ ಎಂಬ ಪದವೂ ಸಹ ಭಗವಂತನ ವ್ಯಾಖ್ಯೆಗೆ ಸರಿಹೊಂದುತ್ತಿದೆಯಲ್ಲಾ!. ಅನಂತದಿಂದ(infinite) ಹುಟ್ಟಿದ ಅಂತರ (space), ಅನಂತದೊಳಗೇ ಅವಿತು ಕೂತಿದೆ. ಅಂತರವನ್ನು ತನ್ನ ಒಡಲಿನೊಳಗೇ ಅಡಗಿಸಿಕೊಂಡು, ಅದರ ಚಲನವಲನಗಳನ್ನು ಪರಿವೀಕ್ಷಿಸುತ್ತಿರೋ ಈ ಅನಂತವೇ ಭಗವಂತನೋ ಇಲ್ಲಾ ಭಗವಂತನೇ ಅನಂತವೋ?

          ಭಗವಂತ ಶೂನ್ಯವೋ ಅನಂತವೋ... ಈ ಹಿಂದಿನ ಪ್ರಮೇಯದ ಪ್ರಕಾರ, ಕಣಗಳನ್ನು ವಿಭಜಿಸುತ್ತಾ ಹೋದರೆ ಒಂದು ಹಂತದಲ್ಲಿ ವಿಭಜಿಸ ಹೊರಟ ಕಣವೇ ಕಾಣೆಯಾಗಿ, ಶೂನ್ಯವನ್ನು ತಲುಪುವುದು. ಶೂನ್ಯವನ್ನು ತಲುಪಲೇ ಬೇಕೆಂದಲ್ಲಿ ನಾವು ಆ ಅಣುವನ್ನು ಅನಂತ ಬಾರಿ (infinite times) ವಿಭಜಿಸಬೇಕು. ಶೂನ್ಯ ಅನಂತವನ್ನು ಊಹಿಸಲೂ ಕಷ್ಟ ಎನ್ನುವ ನಾವು ಭೂಮಿಯಮೇಲೆ ನಮ್ಮದೇ ಆದ ಸೀಮೆಯನ್ನು ಕಟ್ಟಿಕೊಂಡು ಬಾಳುತ್ತಿದ್ದೇವೆ. ನಮ್ಮಗಳ ಮಧ್ಯ, ಶೂನ್ಯವನ್ನು(ಅಥವಾ ಅನಂತವನ್ನು) ತಲುಪಿ, ತನ್ನ ಹಾಗೂ ಶೂನ್ಯದ (ಅನಂತದ) ನಡುವೆ ಏನೂ ವ್ಯತ್ಯಾಸವೇ ಕಾಣದೇ, ಶೂನ್ಯವನ್ನು ಅಪ್ಪಿಕೊಂಡು, ಮರಳಿ ನಮಗಾಗಿ ಈ ಸೀಮಿತ ಪ್ರಪಂಚಕ್ಕೆ ಹಿಂತಿರುಗಿದ ಸನ್ಯಾಸಿಗಳು ಮಾಡಿದ ಪಾಠವು ನಮಗೆ ಈ ಸೀಮಿತ ಬೇಲಿಯ ಒಳಗೆ ಸುಖವನ್ನು ಕಂಡುಕೊಳ್ಳಲು ದಾರಿ ದೀಪವಾಗಿದೆ ಅನ್ನಬಹುದು. ನಿಜಕ್ಕೂ ಮೆಚ್ಚಲೇಬೇಕಾದಂಥದ್ದು ನಮ್ಮ ಪೂರ್ವಜರ ಬಲು ಚಾತುರ್ಯದ ಚಿಂತನಾಸಾಮರ್ಥ್ಯವನ್ನು (innovative thinking ability). ಶೂನ್ಯದಲ್ಲಿ ಎಲ್ಲವನ್ನೂ ಅಡಗಿಸಿಕೊಂಡಿರುವ ಭಗವಂತ ಶಕ್ತಿಗೆ ಶಿವ ಎಂದು ನೇಮಕಾತಿ ಮಾಡಿದರು. ಅಂತರದಲ್ಲಿ ಅನಂತ ಆನಂದದ ಸೂತ್ರವನ್ನು ಹಿಡಿದಿರುವ ಭಗವಂತ ಶಕ್ತಿಗೆ ವಿಷ್ಣು ಎಂದು ಕರೆದರು. ಶೂನ್ಯದ () ಪಕ್ಕ ಇನ್ನೊಂದು ಶೂನ್ಯ ಬರೆದರೆ ಅನಂತವಾಗುತ್ತದೆ (). ಶಿವ ಅನ್ನೋ ಪದಾನ ತಿರುಗಿಸಿ ಬರೆದರೆ ವಿಷ್ಣು ಸಿಗ್ತಾನೆ. ಹಾಗಾದರೆ ಶೂನ್ಯವನ್ನು ಗಳಿಸಲು ಅನಂತವನ್ನು ಬಳಸುವುದೋ, ಇಲ್ಲ ಶೂನ್ಯಕ್ಕೆ ಶೂನ್ಯವನ್ನು ಸೇರಿಸಿ ಅನಂತನನ್ನು ತಲುಪುವುದೋ? ಶಿವನನ್ನು ತಲುಪಲು ವಿಷ್ಣು ಬೇಕೋ ಇಲ್ಲ ವಿಷ್ಣುವನ್ನು ತಲುಪಲು ಶಿವನನ್ನು ಬಳಸುವುದೋ?


ಸರ್ಪದ ಕಣ್ಣಿನದ್ದು ಸಮೀಪ ದೃಷ್ಟಿ (small focal length). ಆದ್ದರಿಂದ ಸಮೀಪದ ವಸ್ತುಗಳನ್ನು ಅದು ಬಹಳ ಸ್ಪಷ್ಟವಾಗಿ ಕಾಣಬಲ್ಲುದು (narrow vision). ಆದರೆ ಗರುಡ ತನ್ನ ನಾಭಿಕೇಂದ್ರಿತ ದೃಷ್ಟಿಯನ್ನು ಬಲು ದೂರದತನಕ ಹಾಯಿಸಬಹುದು (can extend to longer focal length). ಶೂನ್ಯದ ಹುಡುಕಾಟಕ್ಕೆ ಸರ್ಪದೃಷ್ಟಿ ಬೇಕು. ಅನಂತದ ಅನುಭವಕ್ಕೆ ಗರುಡ ದೃಷ್ಟಿ ಅತ್ಯವಶ್ಯ. ಅದಿಕ್ಕೇ ಇರಬಹುದು ನಮ್ಮ ಪೂರ್ವಜರು ಸರ್ಪವನ್ನು ಶಿವನ ಕುತ್ತಿಗೆಗೆ ಸುತ್ತಿ ಚಿತ್ರಬಿಡಿಸಿದ್ದು! ಹಾಗು ವಿಷ್ಣುವನ್ನು ಗರುಡನ ಮೇಲೆ ಕೂರಿಸಿ ಪ್ರಯಾಣ ಮಾಡಿಸಿದ್ದು! ಶೂನ್ಯ ತತ್ವವು ನಿವೃತ್ತಿ ಮಾರ್ಗಕ್ಕೆ ಪ್ರೇರೇಪಿಸುತ್ತದೆ. ಈ ಜಗತ್ತೇ ಶೂನ್ಯವೆಂದಮೇಲೆ ನಾವು ಈ ಜಗತ್ತಿಗೆ ದೈಹಿಕವಾಗಿ, ಮಾನಸಿಕವಾಗಿ ಅಂಟಿಕೊಂಡಿರುವುದು ತರ್ಕಭದ್ದವಲ್ಲ. ಹಾಗಂತ ಎಲ್ಲರೂ ಸಂಸಾರದಿಂದ ನಿವೃತ್ತಿಹೊಂದಿ ಸನ್ಯಾಸ ಸ್ವೀಕರಿಸಿದರೆ, ಮನುಷ್ಯ ಜನ್ಮವೇ ನಶಿಸಿ ಹೋದೀತು. ಇದರ ಕುಂದು ಕೊರತೆಯನ್ನು ಪ್ರವೃತ್ತಿ ಮಾರ್ಗ ತೀರಿಸುತ್ತದೆ. ಒಂದು ಸುಂದರ ಸಮಾಜಕ್ಕೆ ಬೇಕಾಗೋ ಯಮ ನಿಯಮಗಳನ್ನು (do’s and dont’s) ಈ ಅನಂತ ತತ್ವ (ಪ್ರವೃತ್ತಿ ಮಾರ್ಗ) ದಲ್ಲಿ ಸಿಗುತ್ತದೆ. ಒಂದು ಕಯ್ಯಿ ಶಿವಲಿಂಗಕ್ಕೆ ತಾಕಿಕೊಂಡೇ, ಇನ್ನೊಂದು ಕಯ್ಯಲ್ಲಿ ಕಮಲದ ಹೂವು ಹಿಡಿಯುವ ಗುಟ್ಟು ವಿಷ್ಣುವು ಪ್ರವೃತ್ತಿ ಮಾರ್ಗದಲ್ಲಿ ರಟ್ಟು ಮಾಡಿದ್ದಾನೆ. ಶಿವ ಅಥವಾ ವಿಷ್ಣುವಿಗಿರುವ ಸಹಸ್ರನಾಮಾವಳಿಗಳಿರಬಹುದು, ಕಥೆ ಉಪಕಥೆಗಳಿರಬಹುದು, ಅವುಗಳಲ್ಲೆಲ್ಲಾ ನಮ್ಮ ಜೀವನಕ್ಕೆ ಬೇಕಾಗೋ ಹಲವು ಅಂಶಗಳನ್ನು ಹುದುಗಿಸಿಟ್ಟಿದ್ದಾರೆ. ಎಲ್ಲವೂ ಶೂನ್ಯ ಎನ್ನುವ ನಶ್ವರ ತತ್ವದಿಂದ ಭೋದಿಸಲಾಗದ ಕೆಲವು ವಿಷಯಗಳನ್ನು ಅನಂತ ತತ್ವದಲ್ಲಿ (ವಿಷ್ಣುರೂಪದಲ್ಲಿ) ಹೇಳಿದರು. ಜಗತ್ತು ಅನಂತ ಎಂಬ ತತ್ವದಿಂದ ಭೋದಿಸಲಾಗದ ಕೆಲವು ಅಂಶಗಳನ್ನು ಶೂನ್ಯ ತತ್ವದಲ್ಲಿ (ಶಿವನರೂಪದಲ್ಲಿ) ವಿವರಿಸಿದರು. ಎರಡೂ ತತ್ವದ ವಿಚಾರವನ್ನು ಅರಿತು ಈ ಭೂಮಿಯ ಮೇಲೆ ನಾವು ಒಂದು ಸಂತಸದ ಗೂಡು ಕಟ್ಟಬೇಕು ಅನ್ನೋ ಪೂರ್ವಜರ ಅಭಿಲಾಷೆ ಎಷ್ಟರ ಮಟ್ಟಿಗೆ ಇಂದು ಪೂರ್ಣಗೊಂಡಿದೆ ಎಂಬುದು ಅವರಿಗೆ ಗೊತ್ತಾಗದಿದ್ರೆಸಾಕು!!!.


          ಉಪನಿಷತ್ತಿನ ಪ್ರಕಾರ ನಾವು ಎಂದಿನಿಂದ ನಮಗಿರುವ ತಿಳುವಳಿಕೆಯು ಶ್ರೇಷ್ಟವೆಂದು ಪೂಜಿಸಲು ಶುರುಮಾಡ್ತೀವೋ, ಅಲ್ಲಿಗೆ ನಮ್ಮ ಜೀವನದ ತಿಳುವಳಿಕೆಯ ಪ್ರಕ್ರಿಯೆ ಸ್ಥಗಿತಗೊಂಡುಬಿಡುತ್ತದಂತೆ. ಕೆಲವೊಂದು ಬಲು ಸುಲಭ ಎನಿಸುವ ಸಾಮಾನ್ಯ ಜ್ಞಾನ ತಲೆಗೆ ಹೊಕ್ಕುಳಿಯಲು ನಿರಾಕರಿಸಿಬಿಡಬಹುದು. ಇಂಥದೊಂದು ಸಾಮಾನ್ಯ ಜ್ಞಾನದ ವಿಚಾರಕ್ಕೂ ಮೀರಿ ನಾವು ತಲೆ ತಲಾಂತರದಿಂದ ಜಗಳ ಮಾಡಿಕೊಂಡುಬಂದಂಥ ಒಂದು ಪ್ರಶ್ನೆ ಭಗವಂತನೆಂದರೆ ಶಿವನೋ ವಿಷ್ಣುವೋ? ದೇವರು ಶೂನ್ಯವೋ ಅನಂತವೋ?


          ದೇಹವು ನಶಿಸಿದ ನಂತರವೂ ಯಾವುದು ಜೀವಂತ ಇರುವುದೋ ಅದೇ ನಿಜವಾದುದು, ಅದೇ ಶಾಶ್ವತವಾದುದೆಂದು ಗೋರಿ ಕಟ್ಟಿಸಿ ಶೂನ್ಯಕ್ಕೆ ತಲೆಬಾಗೋ ಇಸ್ಲಾಂ ಪ್ರತಿಪಾಲಕರ ಧಾರ್ಮಿಕ ಸಂಕೇತ ಅನಂತವನ್ನು ಬಿಂಬಿಸೋ ಚಂದ್ರ ನಕ್ಷತ್ರ.   fig-1 ಕ್ರಿಶ್ಚಿಯನ್ ಧರ್ಮದ ಅತಿಪುರಾತನಕಾಲದ ಈ ಚಿಹ್ನೆ ಗರ್ಭಗುಡಿಯ ಬಾಗಿಲನ್ನು ಸಾಂಕೇತಿಸುವುದರ ಮೂಲಕ ಅನಂತ ಆನಂದವನ್ನು ವರ್ಣಿಸುತ್ತದೆ(6),(7). ತದನಂತರ ಈ ಅನಂತ ಆನಂದದೊಳಗೆ ಹುಟ್ಟಿದ ಪುತ್ರ (ಅನಂತದ ಪುತ್ರ Fig-2 ), ಶೂನ್ಯವನ್ನು ಸಾಂಕೆತಿಸೋ ಶಿಲುಬೆ “ † ”. Fig-2 ನಲ್ಲಿರುವ ಚಿಹ್ನೆಯನ್ನು ನಾನೊಬ್ಬ ವಿಮರ್ಶಕನಾಗಿ ಓದಿದಾಗ, ಅನಂತದೊಳಗೆ ಶೂನ್ಯವಿದ್ದುದಾಗಿಯೂ ಹಾಗೂ ಶೂನ್ಯ ಇಡೀ ಅನಂತವನ್ನು ಆವರಿಸಿದಂತೆಯೂ ಭಾಸವಾಗುತ್ತದೆ. ಅಷ್ಟೇ ಅಲ್ಲ. ಈಶಾವಸ್ಯ ಉಪನಿಷತ್ತಿನ ಒಂದು ಶ್ಲೋಕದಲ್ಲಿ ಈ ಚಿಹ್ನೆಯ ಗಾಢವಾದ  ವಿವರಣೆಯು ಅತ್ಯಂತ ಸೂಕ್ಷ್ಮವಾಗಿ ಅಡಕವಾಗಿದೆ.


Fig-1                                                                                               Fig-2


“ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೆ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೆ
ಓಂ ಶಾಂತಿ ಶಾಂತಿ ಶಾಂತಿ ಓಂ”


‘ಓಂ ಪೂರ್ಣಮದಃ ಪೂರ್ಣಮಿದಂ’-
ಅನಂತವೂ (Fig-1) ಪೂರ್ಣ, ಶೂನ್ಯವೂ ಪೂರ್ಣ(†),
‘ಪೂರ್ಣಾತ್ ಪೂರ್ಣಮುದಚ್ಯತೆ’-
ಒಂದು ಪೂರ್ಣತೆಯಿಂದ ಇನ್ನೊಂದು ಪೂರ್ಣಗೊಂಡಿದೆ.(Fig-2) ಶೂನ್ಯವು ಅನಂತದ ಇರುವಿಕೆಯಿಂದ ಸಂಪೂರ್ಣ, ಅನಂತವು ಶೂನ್ಯದ ಇರುವಿಕೆಯಿಂದ ಸಂಪೂರ್ಣ. (ಅನಂತ ಬಾರಿ ವಿಭಜಿಸಿದರೆ ಮಾತ್ರ ಕಣವು ಕಳೆದು ಶೂನ್ಯವಾಗುವುದು. ಶೂನ್ಯ ಇರುವುದಕ್ಕೇ ಅನಂತ ಬಾರಿ ವಿಭಜನೆಗೆ ಒಂದು ಮಹತ್ವ ಇರುವುದು)
‘ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೆ’-
ಒಂದು ಪೂರ್ಣತೆಯಿಂದ ಇನ್ನೊಂದು ಪೂರ್ಣವನ್ನು ಬೇರ್ಪಡಿಸಿದರೆ, Fig-2 (ಪೂರ್ಣ) =  Fig-1 (ಪೂರ್ಣ) + † (ಪೂರ್ಣ),
ಅಲ್ಲಿ ಉಳಿಯುವುದು ಪೂರ್ಣತೆ ಮಾತ್ರ. ಅಲ್ಲಿ ಉಳಿಯುವುದು ಶೂನ್ಯ ಆದ್ರೂ ಆಗ್ಲಿ, ಅನಂತ ಆದ್ರೂ ಆಗ್ಲಿ. ಈ ಎರಡೂ ಎಂದಿಗೂ ಸಂಪೂರ್ಣ. (ಶೂನ್ಯ = ಶೂನ್ಯ + ಅನಂತ, & ಅನಂತ = ಶೂನ್ಯ + ಅನಂತ ).

ಭಗವಂತ = ಭ + ಗ + ವಂತ. ಉರೂಟಾಕಾರದ ಭೂಮಿಯು ಶೂನ್ಯವನ್ನು ಸಾಂಕೇತಿಸಿದರೆ, ವಿಶಾಲವಾದ ಗಗನವು ಅನಂತವನ್ನು ಸಾಂಕೇತಿಸಿದರೆ, ಶೂನ್ಯ (ಭ) ಅನಂತ (ಗ) ಎರಡನ್ನೂ ಹೊಂದಿರುವ (ವಂತ) ಭಗವಂತನಿಗೆ ಯಾವ ಹೊಂದಿಕೆಯ ಹೊದಿಕೆಯೂ ಹೊದಿಸಲಾರದೆ, ನನ್ನೊಳಗೆ ಬೆಚ್ಚಗಿರಿಸಿಕೊಂಡು ಈ ಲೇಖನ ಬರೆದುದಕ್ಕೆ ಒಂದು ಸಾಂತ್ವಾನದ ಪೂರ್ಣವಿರಾಮವನ್ನು ಇಡುತ್ತಿದ್ದೇನೆ.

-ಅನಿರುದ್ಧ ಭಟ್ ಹಟ್ಟಿಕುದ್ರು.

೦೭-೧೨-೨೦೧೩ ರಂದು ಬೋಧಿವೃಕ್ಷದಲ್ಲಿ (ವಿಜಯ ಕರ್ನಾಟಕದ ವಾರಪತ್ರಿಕೆ ) ಪ್ರಕಟಗೊಂಡ ಲೇಖನ.
http://www.bodhivrukshaepaper.com/Details.aspx?id=759&boxid=1626878


ಪರಿಶೀಲಿಸಿದವರಿಗೆ  ಧನ್ಯವಾದಗಳು  (Reviewed by),
ಕಿರಣ್ ಬಸವರಾಜ್
ಗೌರೀಶ್ ಬಿ.


 ಉಲ್ಲೇಖ ಗ್ರಂಥ (References):
2. 7 Secrets of Shiva, by Devdutt Pattanaik
3. 7 Secrets of Vishnu by Devdutt Pattanaik
4. Jewel in the Lotus by Sri M.
5. The Krishna Key by Ashwin Sanghi
8. Introduction to Tantra Shastra by Sir John Woodroffe


2 ಕಾಮೆಂಟ್‌ಗಳು: