ಶನಿವಾರ, ಮಾರ್ಚ್ 9, 2013

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು

ಕೀರ್ತನೆ

ಕರ್ನಾಟಕೀಯ ಸಂಗೀತದ ಪಿತಾಮಹ - ಪುರಂದರದಾಸ 
ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...

ಬೆಕ್ಕು ಭಕ್ಕರಿ ಮಾಡೋದ ಕಂಡೆ,
ಇಲಿಯು ಒಲೆಯ ಹಚ್ಚೋದ ಕಂಡೆ,
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆಗಾತರ... 

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 

ಕಪ್ಪೆ ಪಾತರ ಕುಣಿಯೋದ ಕಂಡೆ,
ಏಡಿ ಮದ್ದಲೆ ಬಾರಿಸೋದ ಕಂಡೆ,
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಾತರ... 

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 

ಅರಿಸಿನ ಪುಡಿಯ ಬಿತ್ತೋದ ಕಂಡೆ,
ಗಸಗಸೆಯನು ಎಣಿಸೋದ ಕಂಡೆ, 
ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ... 

 ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು... 




ಈ ಕೀರ್ತನೆಯನ್ನು ಕೇಳಿದ ನನಗೆ ಮೊದಲು ಬಂದ ಅನುಮಾನ, ಇದನ್ನು ಬರೆದವರು ಪುರಂದರದಾಸರೇ ಹೌದೋ ಎಂದು. ಈ ಕೀರ್ತನೆಯನ್ನು ಬರಿಗಣ್ಣಿನಿಂದ ಓದಿದರೆ ಒಂದು ಸಾಲು ಸಹ ಸಮಂಜಸವಾಗಿ ಬರೆದಂತೆ ಕಾಣುವುದಿಲ್ಲ. ಇದರ ಅರ್ಥ ತಿಳಿಯಲೇಬೇಕೆಂದು ನೆಟ್ಟನೆ ಕೂತು, ಶಿವನು ಕಾಪಿ ರೈಟ್ಸ್ ಇಟ್ಕೊಂಡಿರೋ ಜ್ಞಾನದ ಮೂರನೇ ಕಣ್ಣನ್ನು ಸ್ವಲ್ಪ ಕಾಲ ಬಾಡಿಗೆಗೆ ಪಡೆದು, ಈ ಕೀರ್ತನೆಯನ್ನು ಮತ್ತೊಮ್ಮೆ ಓದಿದೆ. ಆಗ ನನ್ನ ಒಳಗಣ್ಣಿಗೆ ಹೊಳೆದ ಇದರ ಅರ್ಥವನ್ನು ಲೇಖನ ರೂಪದಲ್ಲಿ ನಿಮಗೆ ಅರ್ಪಿಸುತ್ತಿದ್ದೇನೆ.
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು...

        ನಾಗರೀಕತೆಯ ಹುಟ್ಟಿಗೆ ಜೀವವಾದ ಸರಸ್ವತಿ ನದಿಯು ಭೂಮಿಯ ಅಡಿಗಡಿಗೇ ಕುಗ್ಗಿಹೋಗುವುದರ ಜೊತೆಜೊತೆಗೇ ನಾಗರಿಕರ ವೇದ ವಿದ್ಯೆಯೂ ಅವನತಿಯ ಹಾದಿ ಹಿಡಿದಿತ್ತು. ಸತ್ಯಯುಗದಲ್ಲಿ ಬರೀ ಬಾಯಿಂದ ಬಾಯಿಗೆ ಹಬ್ಬುತ್ತಲೇ ಬೆಳೆದುಕೊಂಡುಬಂದಿದ್ದ ವೇದ ವಿಜ್ಞಾನ, ದ್ವಾಪರಯುಗದಲ್ಲಿ ವೇದ ವ್ಯಾಸರ ದೂರದೃಷ್ಟಿಯಿಂದ ೪ ಭಾಗಗಳಾಗಿ ವಿಂಗಡನೆಗೊಂಡು, ಲಿಪಿಯ ರೂಪ ಪಡೆಯಿತು.

          ಕಲಿಯು ಇಂದ್ರನೊಡನೆ ಭಾಗೀದಾರನಾಗಿ ಕಾಮನಬಿಲ್ಲಿಗೆ ಬಾಣವನ್ನು ಬಿಗಿದು ಭೂಲೋಕಕ್ಕೆ ಬಿಟ್ಟು ತನ್ನ ಯುಗದ ಆದಿಯಲ್ಲೇ ಪ್ರಭುತ್ವವನ್ನು ಸಾಧಿಸಿಕೊಂಡನು. ವೇದ ಓದುವ ಜನರ ಕಣ್ಣಿಗೆ ಕಾಮದ ಪೊರೆ ಕಟ್ಟಿಕೊಂಡು, ನಿಜಾರ್ಥಗಳು ಮನಸ್ಸಿಗೆ ನಾಟದೆಯೇ ಸೋಸಿಹೋದವು. ಅವೈಜ್ಞಾನಿಕ ನಂಬಿಕೆ ಆಚರಣೆಗಳು ಬೆಳಕಿನ ವೇಗದಲ್ಲಿ ಹರಡಿ ಪ್ರಚಾರಗೊಂಡವು. ಮೌಢ್ಯತೆಯ ಕೊಚ್ಚೆಯಲ್ಲಿ ಕಾಲಿಟ್ಟಿದ್ದ ಜನರು, ಕೊಚ್ಚೆಯಲ್ಲಿ ವಾಸಿಸುವುದಕ್ಕೂ ಸಮರ್ಥನೆಯನ್ನು ಹುಡುಕಿಕೊಂಡರು. ಈ ಕಲಿಯುಗದಲ್ಲಿ ನಾವು ಕಲಿಯಬೇಕು, ತಿಳಿದುಕೊಳ್ಳಬೇಕು. ಮರೆತುಹೋದ ಹಿಂದಿನ ಯುಗಗಳ ಜ್ಞಾನವನ್ನು ಮತ್ತೆ ಈ ಕಲಿಯುಗದಲ್ಲಿ ಕಲಿಯುವ ಅವಕಾಶ ಇದೆ ಅನ್ನುವುದು ಹೆಚ್ಚಿನ ಜನ ಗುಂಪಿನ ಅರಿವಿಗೆ ಎಟುಕದೆ ಹೋಯಿತು. ಈ ಪರಿಸ್ಥಿತಿಯನ್ನು ಕಂಡು ನೊಂದ ದಾಸರಿಗೆ ಸ್ಪಂದಿಸಿದ ಕನ್ನಡ ಪದಗಳ ಮಾಲೆಯೇ ಈ ಕೀರ್ತನೆ. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು.

        ತರ್ಕ ಮಾಡೋದ್ರಲ್ಲಿ ಎತ್ತಿದ ಕೈ ಅನ್ನಿಸಿಕೊಂಡವರು ತಾವು ಸುಳ್ಳು ಹೇಳುವುದೇ ಇಲ್ಲ, ಸುಳ್ಳು ನಮ್ಮಲ್ಲಿ ಇಲ್ಲ ಎಂದು ವಾದಿಸಬಹುದು. ಆದರೆ ದಾಸರಿಗೆ ಅವರು ಮಾಡುತ್ತಿರೋ ವಿಗ್ರಹ ಪೂಜೆಯ ಹಿಂದಿರುವ ಭಾವನೆಗಳ ಕಟ್ಟಿನಲ್ಲಿ ಸುಳ್ಳು ಎದ್ದು ಕಾಣುತ್ತಿದೆ. ಕೃಷ್ಣನಿಗೆ (ಪರಮಾತ್ಮನಿಗೆ) ಹೃದಯದಲ್ಲಿ ಸ್ಥಾನ ಕೊಡುವ ಬದಲು, ಮನೆಯಲ್ಲಿ ಒಂದು ದೇವರ ಕೋಣೆ ಮಾಡಿ, ಅವನ ವಿಗ್ರಹ ಕೂರಿಸಿ, ಅರ್ಥವಾಗದ ಮಂತ್ರ ತಂತ್ರಗಳ ನಾನಾ ವಿಧಿವಿಧಾನದಿಂದ ಪೂಜಿಸುತ್ತಿದ್ದರು. ಈಗ ಕೂಡ ಅದು ಚಾಲ್ತಿಯಲ್ಲಿದೆ. ಈ ರೀತಿಯ ಆಚರಣೆಗಳು ನಾನಾ ಮೌಢ್ಯತೆ(ಸುಳ್ಳು)ಗಳಿಗೆ ನಲುವಾಯ್ತು. ಮಂತ್ರದ ಅರ್ಥಕ್ಕಿಂತ ಅದನ್ನು ರಾಗವಾಗಿ ಪಠಿಸುವುದೇ ಮುಖ್ಯ ಎಂದು ಪ್ರಕಟಿಸಿದರು. ಪ್ರಶ್ನಿಸುವ ಯುವ ಜನಾಂಗದ ಕೌತುಕತೆಯನ್ನು ಉದ್ಧಟತನ ಎಂದು ಕರೆದರು. ವೇದದಲ್ಲಿ ಕಾಯಕದ ಪ್ರಕಾರ ತೋರ್ಪಡಿಸಿದ ವರ್ಣ ಪದ್ಧತಿಯು ಜಾತಿ ಪದ್ಧತಿಯಾಗಿ ಬದಲಾಯ್ತು. ಮೇಲು ಕೀಳು ಭಾವನೆಗಳು ರೂಢಿಗೆಬಂದವು. ಅಸ್ಪರ್ಷ್ಯತೆಯ ವಿಷವನ್ನು ಎಲ್ಲರೂ ಕುಡಿದು, ತಮ್ಮತನವನ್ನು(ಸತ್ಯವನ್ನು) ಕೊಂದುಬಿಟ್ಟರು. ಸುಳ್ಳಿನಾಚರಣೆಯ ಹಬ್ಬ ಮಾಡಿದರು.

          ಮನಸ್ಸಿನಲ್ಲಿ ಅಸೂಯೆ, ದ್ವೇಷ, ಮತ್ಸರ ತುಂಬಿದ್ದರೂ, ಒಂದು ಕೊಡ ನೀರು ಮೈಮೇಲೆ ಹುಯ್ದುಕೊಂಡಾಕ್ಷಣ ಮಡಿತನವನ್ನು ಪಡೆಯುವ ಚಮತ್ಕಾರೀ ವಿಧಾನಗಳು ಅಳವಡಿಕೆಗೊಂಡವು. ವೇದದ ಒಂದು ಭಾಗವಾದ ಜ್ಯೋತಿ ಶಾಸ್ತ್ರವನ್ನು ಬಿಟ್ಟು ಗ್ರೀಕರು ತೋರಿದ ಜ್ಯೋತಿಷ್ಯ ಶಾಸ್ತ್ರವನ್ನು ಪಸರಿಸಿದರು. ಒಟ್ಟಿನಲ್ಲಿ ದೇವರ ಮೇಲಿರಬೇಕಾದ ಸ್ನೇಹ, ಭಕ್ತಿ ಹೋಗಿ ಭಯದ ವಾತಾವರಣ ಹುಟ್ಟಿಕೊಂಡಿತು. ಬ್ರಹ್ಮ ಕಟ್ಟಿದ ಸಪ್ತಋಷಿಗಳಿಂದ ಹುಟ್ಟಿದ ಬ್ರಾಹ್ಮಣತ್ವವೂ ಭಯವನ್ನು ಹಣವನಾಗಿಸೋ ವ್ಯಾಪಾರದ ಹಾದಿ ಹಿಡಿಯಿತು. ಮನುಷ್ಯರೊಳಗಿರೋ ದೇವರಿಗೆ (ಸತ್ಯಕ್ಕೆ) ಸ್ಪಂದಿಸೋ ಬದಲು, ಗುಡಿಗೋಪುರಗಳಲ್ಲಿ ಪಾಪ ಕಳಿಯಬೇಕೆಂದು ಹುರುಳಾಡಿದರು. ಇನ್ನೊಬ್ಬ ಮನುಷ್ಯನಿಗೆ, ಅಂದರೆ ದೇವರಿಗೆ, ಅಂದರೆ ಸತ್ಯಕ್ಕೆ ಕೇಡು ಬಯಸಿ, ದೇವರಿಗೆ (ಸುಳ್ಳಿಗೆ) ಪ್ರದಕ್ಷಿಣೆ ಹಾಕುವ ವಿಷಾದಕಾರಿ ಬೆಳವಣಿಗೆಗಳು ದಾಸರಿಗೆ ಕಂಡುಬಂದವು. ಕೃಷ್ಣ ನಮ್ಮಲ್ಲಿಲ್ಲವಯ್ಯ ಕೃಷ್ಣ ನಮ್ಮನೆ ದೇವರು. ಅಂದರೆ, ಕೃಷ್ಣ ನಮ್ಮ ಹೃದಯದಲ್ಲಿ ನೆಲೆಸಿರದಿದ್ದರೂ, ಅವನು ನಮ್ಮ ಮನೆ ದೇವರು ಮಾತ್ರ ಹೌದು.

ಯಾರೋ ಒಬ್ಬ ಆಸಾಮಿ, ನಮ್ಮ ಮನೆ ಒಲೆಯ ಒಳಗೆ ಒಂದು ಇಲಿ ಓಡಾಡ್ತಿತ್ತು ಅಂದ. ಇನ್ನೊಬ್ಬ ಆಸಾಮಿ, ನಾವು ದಿನಾ ದೇವರಿಗೆ ಮಂಗಳಾರತಿ ಮಾಡಿನೇ ಒಲೆ ಹಚ್ಚೋದು ಅಂದ. ಇದನ್ನ ಅರ್ಧಂಬರ್ಧ ಕೇಳಿಸ್ಕೊಂಡ ಮೂರನೆ ಆಸಾಮಿ, ಒಹ್ ಅವ್ರಮನೇಲಿ ದೇವರ ಪೂಜೆ ಮಾಡಿದ್ಮೇಲೆ ಗಣೇಶನ ವಾಹನ ಇಲಿ ಹೋಗಿ ಓಲೆ ಹಚ್ಚುತ್ತಂತೆ ಅಂದ. ಇದನ್ನ ಕೇಳಿದ್ ಜನ್ರು ದೇವರನ್ನ ನಾವು ಪ್ರಶ್ನಿಸೋಕಾಗುತ್ಯೇ ಅಂತ ದೊಡ್ಡ ಮನಸ್ಸಿನಿಂದ ಹಾಗೇ ನಂಬಿದ್ರು.
ಬೆಕ್ಕು ಜೋಳದ ರೊಟ್ಟಿ ಮಾಡೋದು, ಇಲಿ ಒಲೆಯ ಹಚ್ಚೋದು, ದೊಡ್ಡ ಮೆಕ್ಕೆಕಾಯಿ, ಪಾತ್ರದೊಳಗೆ ಕಪ್ಪೆ ಕುಣಿತ, ಏಡಿ ತಾಳ ಮದ್ದಲೆ ಬಾರಿಸೋದು, ಒನಕೆ ಗಾತ್ರದ ಮೆಣಸಿನಕಾಯಿ, ಅರಶಿನಪುಡಿಯನ್ನ ಬಿತ್ತೋದು, ಗಸಗಸೇನ ಲೆಕ್ಕ ಮಾಡೋದು, ಇವೆಲ್ಲಾ ಸಾಧ್ಯಾನೇ ಇಲ್ಲ ಅಂತ ಅನ್ನಿಸಿದ್ರೂ, ದೇವರ (ಸುಳ್ಳಿನ) ಹಿನ್ನೆಲೆಯನ್ನು ಕಟ್ಟಿ, ಕಥೆ ಮಾಡಿ, ಆಚರಣೆಯಲ್ಲಿ ಇರಿಸಿದ್ದಿದ್ರೆ, ನಾವೆಲ್ಲಾ ನಂಬುತ್ತಿದ್ವೋ ಏನೋ!!! ಹೀಗೂ ಉಂಟೆ ಅಂತ ಒಂದು ಉಧ್ಗಾರ ತೆಗೆದ್ರೆ, ಅದೇ ಹೆಚ್ಚು.

 ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ... 
ದೇವರು ಹಾಗಿದ್ದಾನೆ, ಹೀಗಿದ್ದಾನೆ, ಅವನ ಪಾದ ಪರ್ವತದಷ್ಟು ದೊಡ್ಡದು, ಅವನಿಗೆ ೮ ಕೈ, ವಸ್ತ್ರ ಹೀಗೇ ಇರುತ್ತೆ ಅನ್ನುವ ಯಾವುದೇ ಗೋಜಲು ಬೇಡ. ನಾವು ಮನುಷ್ಯರಾದ ಕಾರಣ ದೇವರೂ ನಮ್ಮ ಹಾಗೇ ಕಾಣಬೇಕೆಂದಿಲ್ಲ. ದೇವರು ನಮ್ಮನ್ನು ಸೃಷ್ಟಿ ಮಾಡಿದ್ದಾನೆ. ನಾವು ಅವನ ರೂಪವನ್ನೇ ಸೃಷ್ಟಿಸೋ ಗೋಜಲಿಗೆ ಇಳಿಯೋದು ಬೇಡ. ಅವನ ಸುಳ್ಳು ರೂಪವನ್ನು ಬದಿಗೊತ್ತಿ, ಅವನ ಶೂನ್ಯ ಆಕಾರವನ್ನು ಸ್ವೀಕರಿಸೋಣ. ಆತ್ಮಕ್ಕೂ, ಮೆದುಳಿನ ನಿರ್ಧಾರಗಳಿಗೂ ಹೊಂದಾಣಿಕೆಯನ್ನು ಮಾಡಿಸಿ, ಲೋಕದ ಹಿತಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪರಮಾತ್ಮನ ಶೂನ್ಯಾಕಾರವನ್ನು ನಮ್ಮೊಳಗೆ ಪ್ರತಿಷ್ಟಾಪಿಸೋಣ ಎನ್ನುವ ವಿಷಯವನ್ನು ದಾಸರು ಈ ಕೀರ್ತನೆಯ ಮೂಲಕ ನಮಗೆ ತಿಳಿಸ ಬಯಸಿದ್ದಾರೆ. (Paramaatma builds circuit by interconnecting different networks of brain, senses and aatma) ನೇರವಾಗಿ ಬೊಬ್ಬೆ ಹೊಡೆದರೂ ಆ ಕಾಲದಲ್ಲಿ ಅರ್ಥಮಾಡಿಕೊಳ್ಳದ ಜನರಿಗೆ ದಾಸರು ಈ ವ್ಯಂಗ್ಯ ಸಾಲುಗಳನ್ನು ಕಟ್ಟಿ, ಕೀರ್ತನೆಯ ರೂಪದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಸಾಗಿದರು.

ಈ ಕೀರ್ತನೆಯಲ್ಲಿ ದಾಸರು, ವಿಗ್ರಹ ಪೂಜೆಯ ವಿಷಯದಲ್ಲಿ ಅವರಿಗಿರುವ ವೈಮನಸ್ಸನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಮೂಢನಂಬಿಕೆಗಳಿಗೂ ದೇವರಮೇಲಿನ ಭಯವೇ ಕಾರಣ ಎಂದು ಸಾಧಿಸಿ ತೊರಿಸಿದ್ದಾರೆ. ದೇವರನ್ನು ಪ್ರೀತಿಸಬೇಕೆಂದು, ದೇವರ ಗುಡಿಯನ್ನು ನಮ್ಮ ಹೃದಯಲ್ಲಿ ಕಟ್ಟಲು ಪ್ರೇರೇಪಿಸುತ್ತಾರೆ. ಪ್ರತಿಯೊಂದು ಜೀವಿಯೊಳಗೂ, ವಸ್ತುವಿನೊಳಗೂ ಅಡಗಿರುವ ಪರಮಾತ್ಮನ ಸಾಂಕೇತ ಸೂಚಿಯೇ ವಿಗ್ರಹ. ಮನೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಪಟ ಇಡುವುದರಿಂದ, ಆಗಾಗ್ಗೆ ನಮ್ಮ ದೃಷ್ಟಿ ಆ ವಿಗ್ರಹದ ಮೇಲೆ ಹಾಯುತ್ತಿರುತ್ತದೆ. ಹೀಗೆ ಕಂಡಾಗಲೆಲ್ಲ ನಮ್ಮೊಳಗಿರುವ ಆತ್ಮದ ಅವಲೋಕನ ನಡಿಯಲಿ, ನಮ್ಮನ್ನು ನಾವು ದೇಹದಿಂದ, ವರ್ಣದಿಂದ, ಜಾತಿಯಿಂದ ಗುರುತಿಸಿಕೊಳ್ಳದೇ, ಆತ್ಮದ ಮಟ್ಟದಲ್ಲಿ ಗುರುತಿಸಿಕೊಳ್ಳೋಣ. ನನ್ನಲ್ಲಿ ಇರುವ ಆತ್ಮ, ಅವನಲ್ಲೂ ಇದೆ. ಆ ಪ್ರಾಣಿಯಲ್ಲೂ ಇದೆ, ಕೀಟದಲ್ಲೂ ಇದೆ ಎಂದು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನೂ ಗುರುತಿಸೋಣ ಎಂದು ದಾಸರು ಈ ಕೀರ್ತನೆಯಲ್ಲಿ ಕರೆ ನೀಡಿದ್ದಾರೆ.
ಸುಳ್ಳು ನಮ್ಮೆಡೆ ಸುಳಿಯದಿರಲಿ, ಸತ್ಯವಾಗಲಿ ನಮ್ಮನೆ ದೇವರು ...

-ಅನಿರುದ್ಧ ಭಟ್ ಹಟ್ಟಿಕುದ್ರು

೨೧-೧೨-೨೦೧೩ ರಂದು ಬೋಧಿವೃಕ್ಷದಲ್ಲಿ (ವಿಜಯ ಕರ್ನಾಟಕದ ವಾರಪತ್ರಿಕೆ ) ಪ್ರಕಟಗೊಂಡ ಲೇಖನ.
http://www.bodhivrukshaepaper.com/Details.aspx?id=775&boxid=194953156



References (ಉಲ್ಲೇಖ ಗ್ರಂಥ):
1. Secret teachings of Vedas by Stephen Knapp.

ಶುಕ್ರವಾರ, ನವೆಂಬರ್ 9, 2012

LOVE @ 1st SIGHT


ಕಣ್ಣಿನ ರೆಪ್ಪೆಯ ಬಡಿದು,
ಪಾರಿವಾಳದ ರೆಕ್ಕೆಯಂತೆ,
ಕಾಳಜಿ ಕಂಗಳ ಹೊಳಪು ಮೆರೆದಿತ್ತು|

ಕಿವಿಯ ಹಿಂಬದಿ ತೆರಳುತ,
ಎರಡೆಳೆಯ ಕೂದಲು,
ಅಂದದ ನಿಘೂಡವ ಸರಿಸಿತ್ತು|

ಮೂಗುತಿಯದು ಮೂಗಿನ ಕೊಕ್ಕಲಿ,
ಬಿನ್ನಾಣಗಿತ್ತಿಯ ಹೊಕ್ಕು,
ಬಿಂಕದ ಬಿಂಬವ ಬೀರುತ್ತಿತ್ತು|

ಮೇಲ್ದುಟಿ ಸಂಕೋಚ ಸರಿದಂತೆ,
ಕೆಳದುಟಿಯ ಹಂಬಲ ತೆರೆಯಲು,
ಆ ಮೊಗದಲ್ಲೊಂದು ತಾವರೆ ಅರಳಿತ್ತು|

ಭಾವೋದ್ವೇಗದ ಮೊದಲ ನೋಟದಿ,
ಸುರುಳಿ ಸುತ್ತುತ ನನ್ನ ಮನವು,
ಪ್ರೀತಿಯ ಅರ್ಥ ತಿಳಿಸಿತ್ತು|

ಗುರುವಾರ, ನವೆಂಬರ್ 1, 2012

ರಾಜೋತ್ಸವ ರಾಜಧಾನೀಲಿ


ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,

ಎಲ್ಲೋ ದೂರದಲೀ ನನ್ನ ಬೆಂಗ್ಳೂರ್ ಕಾಯುತಿದೇ
ಹೊತ್ತಿಲ್ಲ ಸುಸ್ತಿಲ್ಲ, ದಣಿವೂ ಇಲ್ಲಾ,
ಈ ರೈಲಿಗ್ ಮಧ್ಯದಲ್ ಸ್ಟಾಪೇ ಇಲ್ಲಾ
ಏನೈತೆ ಬೆಂಗ್ಳೂರ್ನಾಗ್ ಕೇಳ್ದವರ್ಯಾರು?,
ಒಂದ್ಸಾರಿ ಬಂದ್ ನೋಡಿ ಬೆಂಗ್ಳೂರ್ ಜೋರು.

ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,
ಎಲ್ಲೋ ದೂರದಲೀ ನನ್ನ ಬೆಂಗ್ಳೂರ್ ಕಾಯುತಿದೇ

ಬೇಸಿಗೆ ದಗೆಯಿಲ್ಲ ಬಾಳಲು,
ಛಳಿಯು ತಾರ್ಕಕ್ಕೆ ಹೋಗದು, ನಮ್ ಬೆಂಗಳೂರ್
ಎಲ್ಲರೂ ಸೇರುವ, ವಗ್ಗೂಡಿ ಬಾಳುವ,
ಅವಕಾಶ ಉಂಟು ನಮ್ಮ ನಾಡಲಿ.

ದೇಶವ ಬೆಳಗುವ ಸಂಸ್ಕೃತಿ ಧ್ವಂದಿ,
ಇಕ್ಕಟ್ಟಲ್ ಕೈ ಕಟ್ಟಿ ನಡಿಯೋಸ್ಟ್ ಮಂದಿ,
ಹೆರದಿದ್ರೂ ಹೊರುತಿರುವ ತಾಯೀ ಮಮತೆ,
ನಾವಾಡೊ ನಾಣ್ಣುಡಿಯೆ ಕನ್ನಡ ಮಾತೆ.

ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,
ಇನ್ನೇನ್ ಹತ್ರದಲ್ಲೇ ನನ್ನ ಬೆಂಗ್ಳೂರ್ ಬರುತಲಿದೆ

ಶನಿವಾರ, ಸೆಪ್ಟೆಂಬರ್ 1, 2012

"ಆಫ್ಟರ್ 8 ಇಯರ್ಸ್" ಬಿಡುಗಡೆ

ಈ ಕೆಳಗಿನ ಚಿಕ್ಕ ಲಿಂಕ್ ಪೋಸ್ಟ್ ಮಾಡೋಕೆ ಇಷ್ಟು ದಿನ ಬ್ಲಾಗ್ ಬರ್ಯೋಕೂ ಆಗ್ಲಿಲ್ಲ... ಕಥೆ, ನಿರ್ದೇಶನ ಹಾಗೂ ನಟನೆಯಲ್ಲಿ ನನ್ನದೂ ಪಾತ್ರವಿರುವ ಈ ಕಿರುಚಿತ್ರ ನಮಗಾಗಿ, ನಿಮಗಾಗಿ :) ಈ ಪ್ರಪ್ರಥಮ ಪ್ರಯತ್ನವನ್ನ ಪ್ರೋತ್ಸಾಹಿಸೋಕೆ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ :)

ಭಾನುವಾರ, ಜುಲೈ 22, 2012

ಕೂಸಳ್ಳಿ Falls-ಪ್ರಕೃತಿ ಮಡಿಲಲ್ಲಿ

       ಗಂಡು ಮಕ್ಳಿಗೆ ಆಗಾಗ love failure ಆಗೋದು ಸಾಮಾನ್ಯ. ಮಾತುಕಥೆ ಆಗ್ಲಿಲ್ಲಾಂದ್ರೂ ಮನಸಲ್ಲೇ ಸಾವಿರ ಅಂದ್ಕೊಂಡು ಕೊರಗ್ತಾವೆ ಅಂತ ಹೇಳಿದ್ರೆ ಯಾವುದೇ ಪ್ರಮೇಯದ ಮುಖಾಂತರ ತಪ್ಪೆಂದು ವಾದಿಸೋಕೆ ಸತ್ಯ ಸಾಕ್ಷಿ ಇಲ್ಲ.

ಕೊರಗಿ ಕೊರಗಿ ಹೃದಯಾನ ಹಿಂಡಿ ಹಿಪ್ಪೆ ಮಾಡಿ, ಮನಸ್ಸನ್ ಮುದಡ್ಸ್ಕೊಂಡು, ಮೂತೀನ ಸೊರಗಿಸ್ಕೊಂಡು, ಭ್ರಾಂತಿನ ಮೂಡಿಸ್ಕೊಂಡು, ಜೀವನದ ರಸಕ್ಷಣಗಳನ್ನು ಬಂಜರಾಗಿಸಿಕೊಂಡಿದ್ದ ನಾನು ಅವಳ ನೆನಪುಗಳಿಂದ ಸ್ವಲ್ಪ ದೂರ ಸರಿಯೋಣ ಅಂತ ಪ್ರಕೃತಿ ತಾಣಕ್ಕೆ ಹೋಗಿದ್ದೆ.



         ಕುಂದಾಪುರ ತಾಲ್ಲೂಕಿನ ಬೈಂದೂರಿನ ಹತ್ತಿರ, ಪಶ್ಚಿಮ ಘಟ್ಟದ ಕಾಡುಪ್ರದೇಶದ ಮಧ್ಯೆ ಒಂದು ಜಲಪಾತ ಇದೆ. ಕೂಸಳ್ಳಿ falls ಅಂತ ಅದ್ರ ಹೆಸ್ರು. ಕಾಡ ಹಾದಿಯಲ್ಲಿ ಹೋಗ್ತಾ ಇದ್ರೆ ಹಿಂದೆಂದೂ ಇಲ್ಲಿಗೆ ಜನಾನೇ ಬಂದಿಲ್ಲ ಅನ್ನೋಷ್ಟು ದಟ್ಟವಾಗಿಲ್ಲ. ನಮ್ಮಂಥ ಹುಡುಗ್ರು ಜೊತೆಗಿದ್ರೆ, ಸುಮಾರಿಗ್ ವಯಸ್ಸಾದವ್ರೂ ಬರಬಹುದು. ಕಾಡಿನ ಎತ್ತರ ಏರಿ; ಇಳಿಯನ್ನು ಜಾರಿ, ಜಲಪಾತದ ತಪ್ಪಲಿಗೆ ಸೇರಿದೆ. ಮುಖ ತೊಳೆದು ಅಮೃತದ ಆಸರೆ ಸ್ವೀಕರಿಸಿದವನಿಗೆ ಎಲ್ಲಿಲ್ಲದ ಹರುಷ, ಶಕ್ತಿ. ಹತ್ತಿ ನಡೆದೆ ಶೈಲಜಾಳ(ಶೈಲಜ = ಶೈಲ+ಜ = ನದಿ) ಮೂಲ ಹುಡುಕಿ. ೭ ಹಂತದಲ್ಲಿ ಧುಮುಕೋ ಜಲಪಾತದ ೫ ಹಂತಗಳನ್ನು ಮಾತ್ರ ನಾನು ಕ್ರಮಿಸಿದ್ದು. ೫ ನೇ ಹಂತದಲ್ಲಿ ನೀರಿನ ಧುಮುಕಿನಿಂದ ಬಂಡೆ ಮಧ್ಯ ಉಂಟಾದ ಕೊಳದಲ್ಲಿ ಈಜಿ, ಬಂಡೆ ಮೇಲೆ ಬಂದು, ಸೂರ್ಯನ ಬಿಸಿಲಿಗೆ ಮಯ್ಯೊಡ್ಡಿ ಮಲಗಿದೆ.    ಆಯಾಸ ತಣಿತಿದ್ದಂಗೇ, ಜಲಪಾತದ ಸದ್ದು ಹೆಚ್ಚಾಗತೊಡಗಿತು. ಆ ನೀರಿನ ಸಣ್ಣ ಸಣ್ಣ ಝರಿಯು ನನ್ನ ಮುಖದ ಮೇಲೆ ಕೂತು ಪುಳಕಗೊಳಿಸುತ್ತಿದ್ದವು. ಆವಿಯಾಗುತ್ತಿದ್ದ ನೀರಿನ ಸಿಬಿರಿನ ಮುಖಾಂತರ ಹಾದುಹೊಗೋ ಸೂರ್ಯನ ಕಿರಣಗಳು ನನ್ನ ರೋಮಾಂಚನಗೊಳಿಸುತ್ತಿದ್ದವು. ಹರ್ಷದಿಂದ ಹಿಗ್ಗಿದ ನನ್ನ ಹೃದಯದಲ್ಲಿ ಆ ಕ್ಷಣ ಪರಮಾತ್ಮ ನೆಲೆಸಿದ್ದ; ನನ್ನ ನೋವು, ಲೌಕಿಕ ಒಪ್ಪಂದಗಳನ್ನು ಮರೆಸಿದ್ದ; ಸ್ವರ್ಗ ಸುಖಾನ ಭೂಮಿ ಮೇಲೆ ಆಹ್ವಾನಿಸಿದ್ದ.



     
             ನಾನಲ್ಲಿ ಎಕಾಂಗಿಯಾಗಿರಲಿಲ್ಲ. ನನ್ನೊಂದಿಗೆ ಪ್ರಕೃತಿ ದೇವತೆಯಿದ್ದಳು. ಅವಳ ಮಡಿಲಲ್ಲಿ ನಾ ಮಲಗಿದ್ದೆ. ಆ ಹಸಿರಿನ ನಡುವೆ ನನಗಾಗಲಿಲ್ಲ ಹಸಿವು. ತಾಯಿಯ ಆರೈಕೆ ನನಗಲ್ಲಿ ಪ್ರಾಪ್ತಿಯಾಗಿತ್ತು. ಪಂಚೇಂದ್ರಿಯಗಳು ನಲಿದಾದುತ್ತಿದ್ರೆ, ನನ್ನೆದೆಯ ಪರಮಾತ್ಮ ಹಾಡು ಶುರು ಮಾಡಿದ್ದ.
"ಮರೆತೆ ನಾನು ನಿನ್ನ,
 ಅರಿತೆ ಪ್ರಕೃತಿಯನ್ನ.... "
ಮನಸ್ಸಿಗೆ ಮುದ ಬರ್ತಿದೆ, ದೇಹ ಒಂದು ಹದಕ್ ಬರ್ತಿದೆ.
 
       ಜೀವನದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸುಖಸಂತೋಷಗಳು ನಮ್ಮನ್ನ ಹುಡುಕ್ಕೊಂಡು ಬರ್ತವೆ. ನಾವು ಸಮಾಧಾನದಿಂದ ಕಾಯ್ಬೇಕಷ್ಟೇ... ಪ್ರೀತಿ ಬರೀ ಹುಡ್ಗೀರ್ ಮೇಲೇ ಆಗಬೇಕಾ? ಇಷ್ಟೊಂದು ಸೌಂದರ್ಯರಾಶಿಗೆ ಒಡತಿಯಾದ ತಾಯಿಯಲ್ಲಿ ಪ್ರೀತಿ, ಆರೈಕೆ ಕಾಣಿಸೋಡಿಲ್ವೆ? ಇಂಥ ಚಿಕ್ಕ ಚಿಕ್ಕ ಪ್ರಶ್ನೆಗಳು ನೀರಿನ ಗುಳ್ಳೆಗಳಂತೆ ನನ್ನ ತಿಳಿ ಮನಸ್ಸಿನ ಮೇಲ್ಮೈಯಲ್ಲಿ ಹುಟ್ಟಿ ಸಾಯುತ್ತಿದ್ದವು. ನಿಷ್ಕಲ್ಮಷ ನೀರಿನ ಝರಿಯ ಚುಂಬನ ನನಗೆ ಮೋಡಿ ಮಾಡಿತ್ತು. ನನ್ನ ಕಣ್ಗಳನ್ನ ಅರಳಿಸಿತ್ತು.



           ನಿಮಗೇನಾದ್ರು ನಿಮ್ಮ ಪಂಚೆಂದ್ರಿಯಾನ ಶುದ್ಧೀಕರಿಸಿಕೊಂಡು, ನಿಮ್ಮೊಳಗಿನ ಪರಮಾತ್ಮನ ಭರತನಾಟ್ಯ ನೋಡೋ ಆಸೆ ಆದ್ರೆ ಕೂಸಳ್ಳಿ falls ಗೆ ಜರೂರ್ ಹೋಗಿ. ೭ ಹಂತಕ್ಕೂ ಮೀರಿ ಮೇಲೇರಿದರೆ, ಅಲ್ಲಿ ಇನ್ನೆರೆಡು ಹಂತದ ಜಲಪಾತ ಇದ್ಯಂತೆ. ಅದರ ಹೆಸ್ರು ಗೂದನಗುಂಡಿ falls ಅಂತೆ. ನಾನು ನೋಡ್ಲಿಲ್ಲ. ಅಲ್ಲಿಗೆ ಬೇರೆ ದಾರಿ ಹಿಡಿದು, ಸೀದ ಜಲಪಾತದ ಮೇಲೆ ಹೋಗಿ ಸೇರಿದ ನನ್ನಣ್ಣ ರಾಕೇಶ್ ಹೇಳಿದ್ದು. ಹ್ಞಾಂ! ನಿಮ್ಮ ಮಾಹಿತಿಗೆ ನಾನು ಸುರಕ್ಷಿತವಾಗಿಯೇ ವಾಪಸ್ ಇಳಿದು, ಮನೆಗೆ ಬಂದು, ಹೊಸ ಜೀವನದ ಶೈಲಿಯನ್ನು ರೂಪಿಸಿಕೊಂಡು ಈ ಲೇಖನಾನ ಬರ್ದಿದೀನಿ.

Photo Owner : ರಾಕೇಶ್  ಹೊಳ್ಳ .










    

ಬುಧವಾರ, ಜುಲೈ 18, 2012

ಆಫ್ಟರ್ 8 ಇಯರ್ಸ್


ಸಮಸ್ಯೆಯ ಸೂತ್ರ ಬಿಡಿಸೋಕೆ ಹೊಸ ಮಾಧ್ಯಮದೊಂದಿಗೆ, ನಿಮ್ಮೆದುರಿಗೆ.


ವೈಟ್ ನೋಯ್ಸ್ ಅರ್ಪಿಸುವ ಕಿರುಚಿತ್ರ ಆಫ್ಟರ್ 8 ಇಯರ್ಸ್... 


ಅತಿ ಶೀಘ್ರದಲ್ಲಿ... 





ಪೋಸ್ಟರ್ ಡಿಸೈನ್: ಕಿರಣ್ ಬಸವರಾಜ್.

ಅರ್ಥ ಬಿಂಬಿಸೋ ಸಾಲು ಬರೆದು ಕೊಟ್ಟವರು: ಕಿರಣ್ ಭಟ್

ಬುಧವಾರ, ಜೂನ್ 13, 2012

ಕನ್ನಡದ ಚಿಟ್ಟೆ

       ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕುದ್ರೆಮುಖದಲ್ಲಿ ನಡಿಸ್ತಿರೋ ೨೭ನೇ ಕನ್ನಡ ಜನಪ್ರಿಯ ವಿಜ್ಞಾನ ಲೇಖಕರ ತರಬೇತಿ ಶಿಬಿರದಲ್ಲಿ ಭಾಗವಹಿಸೋಕಂತ k.s.r.t.c ಬಸ್ಸು ಹತ್ತಿ ಕೂತು, ಗೆಳೆಯ ಕಿರಣ್ ಗೆ ಫೋನ್ ಮಾಡಿ ಹರಟೆ ಹೊಡಿತಾ ಕೂತ ನನ್ನ  ಪಕ್ಕದ ಬಸ್ ಮೇಲೆ "ಸುವರ್ಣ ಕರ್ನಾಟಕ" ಎಂದು ಬರೆದ ಕನ್ನಡದ ಲಿಪಿ ಕಣ್ಣಿಗೆ ಕುಕ್ಕುತ್ತಿತ್ತು. 'ವ' ಮತ್ತು ಅರ್ಕ ವತ್ತಿನ ನಡುವೆ ಇರೋ 'ಣ' ಹಾಗೂ ಅರ್ಕ ವತ್ತು, 'ಕ' ನಡುವಿನ 'ಟ'  ಆ ಕುಂಕುಮ ವರ್ಣದಲ್ಲಿ ನನಗೆ ಚಿಟ್ಟೆಗಳಂತೆ ಕಂಗೊಳಿಸಿದರೂ, ಹಾರದೇ ಅಲ್ಲೇ ಕೂತಿದ್ದವು. ಚಿಟ್ಟೆ ಎಷ್ಟೊತ್ತಿಗೆ ಹಾರೋಗುತ್ತೆ ಅಂತ ಹೇಳೋಕಾಗಲ್ಲ! ನನಗೆ ಆ ಘಳಿಗೆಯ ಮೇಲಿದ್ದ ಆತುರ, ಅಗತ್ಯವನ್ನು ಕಿರಣ್ ಗೆ ತಿಳಿಸಿ, ಗಡಿಬಿಡಿಯಲ್ಲಿ ಫೋನ್ ಇಟ್ಟು, ಪೆನ್ನು ಪೇಪರ್ ತೆಗೆದು "ಣ ಹಾಗು ಟ ದಲ್ಲಿನ ಚಿಟ್ಟೆ" ಅಂತ ಬರೆದೆ. ಅರ್ರೆ!!! "ಚಿಟ್ಟೆ" ಒಳಗೇ ೩ ಚಿಟ್ಟೆ ಕಾಣಿಸ್ಬೇಕಾ ನಂಗೆ.!.. ನಂಗೆ ಕಾಣ್ಸಿದ್ದನ್ನ ನಿಮಗೂ ಕಾಣ್ಸುವಂತೆ ಈ ಚಿತ್ರದಲ್ಲಿ ಬಿಡಿಸಿದ್ದೀನಿ... ನೋಡಿರಿ, ನಮ್ಮ ಲಿಪಿಯ ಸೌಂದರ್ಯವನ್ನ ಸವಿಯಿರಿ, ಬೇರೆಯವ್ರ ಅನುಭವಕ್ಕೂ ಈ ರುಚಿಯನ್ನೂ ಹರಡಿ. ಹಾಂ. ಚಿಕ್ಕ ಮಕ್ಳಿಗೆ ಪಾಠ ಹೇಳೋವ್ರು ಇದ್ರೆ, ನಮ್ಮ ಲಿಪಿಯಲ್ಲಿ ಅಡಗಿರೋ ಗಮ್ಮತ್ ನ ಪರಿಚಯಿಸೋದು ಮರಿಬೇಡಿ. ನಾನೂ ಮರಿಯದೇ ಪರಿಚಯಿಸೋ ಪ್ರಯತ್ನ ಮಾಡ್ತಿರ್ತೀನಿ :) 

       ಕನ್ನಡದ ಕಾಮಧೇನು, ಕನ್ನಡದ ಕಲ್ಪವೃಕ್ಷವ ಕಂಡಿದ್ದೀರಿ ನೀವು... ಕಂಡಿರೇ ಕನ್ನಡದ ಚಿಟ್ಟೆಯ!


     
ಕನ್ನಡದ ಚಿಟ್ಟೆ...
ಬೇಕಿಲ್ಲ ಇದಕೆ ರಂಗಿನ ಬಟ್ಟೆ.
ಅಪ್ಪ ಅಮ್ಮ ಮಗು ಚಿಟ್ಟೆ...
ಇದು ಕನ್ನಡದ ಚಿಟ್ಟೆ. :)